ಬನವಾಸಿ: ಇಲ್ಲಿಯ ಸುಪ್ರಸಿದ್ಧ ಸಾರ್ವಜನಿಕ ಶ್ರೀ ಗಜಾನೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ್ದ ಬನವಾಸಿ ಕಾ ರಾಜಾ ಗಣೇಶ ವಿಗ್ರಹವನ್ನು ಶನಿವಾರ ಅದ್ದೂರಿಯಾಗಿ ಮೆರವಣಿಗೆ ಮೂಲಕ ಸಮೀಪದ ರಾಮತೀರ್ಥ ಕೆರೆಯಲ್ಲಿ ವಿಸರ್ಜಿಸಲಾಯಿತು. ಸಂಜೆ 4 ಗಂಟೆಗೆ ಅಲಂಕೃತ ವಾಹನದಲ್ಲಿ ವಿಧವಿಧವಾದ ಹಣ್ಣುಗಳಿಂದ ನಿರ್ಮಿಸಿದ ಮಂಟಪದಲ್ಲಿ ಗಣೇಶ ಮೂರ್ತಿಯನ್ನಿಟ್ಟು ಗಣೇಶ ವಿಸರ್ಜನೆಗೆ ಚಾಲನೆ ನೀಡಲಾಯಿತು. ಹುಬ್ಬಳ್ಳಿಯ ಅಲ್ಪೇನ್ ಡಿಜೆ ಸೌಂಡ್ ಸಿಸ್ಟಮ್ ನ ಮೂಲಕ ಶ್ರೀ ಸಮ್ಮುಖ ವೀರಾಂಜನೆಯ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಬನವಾಸಿಯ ರಾಜಬೀದಿಗಳಲ್ಲಿ ಅದ್ದೂರಿಯಾಗಿ ಸಾಗಿತು.
ಮೆರವಣಿಗೆಯಲ್ಲಿ ಯುವಕರು, ವಯಸ್ಕರು, ಮಹಿಳೆಯರು ಡಿಜೆ ಹಾಡಿಗೆ ಹೆಜ್ಜೆ ಹಾಕಿರುವುದು ಗಮನ ಸೆಳೆಯಿತು. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು ಭಾಗವಹಿಸುವ ಮೂಲಕ ವಿವಿಧ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.ದಾರಿಯುದ್ಧಕ್ಕೂ ಕಿವಿಗಡಚಿಕ್ಕುವ ಧ್ವನಿ ವರ್ಧಕಗಳಿಂದ ಹೊರ ಹೊಮ್ಮುತ್ತಿದ್ದ ಹಾಡಿಗೆ ತಕ್ಕಂತೆ ಯುವಕರು, ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು. ಗಣೇಶ ಸ್ಮರಣೆ, ಗಣೇಶನ ಜಯ ಘೋಷ ಹಾಕುತ್ತಾ ಕುಣಿದು ಕುಪ್ಪಳಿಸಿದರು.
ಜನವೋ ಜನ:
ಗಣೇಶನಿಗೆ ವೈಭವದ ವಿದಾಯ ಹೇಳಲು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವ ಜನ ಒಂದೆಡೆಯಾದರೆ ಗಣೇಶ ವಿಸರ್ಜನೆಯ ಅವಿಸ್ಮರಣೀಯ ದೃಶ್ಯ ಕಣ್ತುಂಬಿಕೊಳ್ಳಲು ಅದಕ್ಕೂ ಹೆಚ್ಚು ಜನ ನೆರೆದಿದ್ದರು. ಗಣೇಶ ಮೆರವಣಿಗೆ ನೋಡಲು ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಬೇರೆ ಬೇರೆ ಊರುಗಳಿಂದ ಆಗಮಿಸಿದ ಸಾವಿರಾರು ಜನರು ಮನೆ, ಅಂಗಡಿ ಸೇರಿದಂತೆ ಕಟ್ಟಡದ ತುತ್ತ ತುದಿಯಲ್ಲಿ ನಿಂತು ಗಣೇಶ ವಿಸರ್ಜನೆಯ ವೈಭವವನ್ನು ವೀಕ್ಷಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ ಹಾಗೂ ಕಿರಣ್ ನಾಯ್ಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.