ರಾಮಕೃಷ್ಣ ಹೆಗಡೆ ಕಡವೆ ಕೈಯಲ್ಲಿ ಸಂಸ್ಥೆ ಸುಭದ್ರ | ರೈತಪರ ನಿರ್ಣಯಕ್ಕೆ, ದಕ್ಷ ಆಡಳಿತಕ್ಕೆ ಸಂದ ಗೌರವ
ಶಿರಸಿ: ಸಹಕಾರ ವ್ಯವಸ್ಥೆಯಲ್ಲಿ ಶತಮಾನಗಳಿಂದ ಕಾರ್ಯನಿರ್ವಹಿಸಿ ಮಾದರಿ ಎನಿಸಿರುವ ಇಲ್ಲಿನ ಟಿಆರ್ಸಿಯ ಉತ್ತಮ ಕಾರ್ಯನಿರ್ವಹಣೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನೀಡುವ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ತನ್ಮೂಲಕ ರಾಜ್ಯದ ಉತ್ತಮ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿ ಟಿಆರ್ಸಿಗೆ 3ನೇ ಸ್ಥಾನ ಲಭಿಸಿದಂತಾಗಿದೆ.
ಟಿಆರ್ಸಿಯ ಪಾರದರ್ಶಕ ಹಾಗೂ ಅತ್ಯುತ್ತಮ ಸೇವೆಗೆ ಲಭಿಸಿದ ಪ್ರಶಸ್ತಿ ಇದಾಗಿದ್ದು ಸೆಪ್ಟೆಂಬರ್ 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನ ವಾರ್ಷಿಕ ಸಭೆಯಲ್ಲಿ ಟಿಆರ್ಸಿ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ. ಈ ಹಿಂದೆಯೂ ಸಹ ಟಿಆರ್ಸಿಗೆ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿದ್ದು, ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಲ್ಲಿ ರಾಜ್ಯದಲ್ಲಿಯೇ ಮಾದರಿಯಾಗಿ ಟಿಆರ್ಸಿ ಸಂಸ್ಥೆಯು ನಿಂತಿದೆ.
ರಾಜ್ಯಮಟ್ಟದಲ್ಲಿ ಟಿ.ಅರ್.ಸಿ.; ಕಡವೆಯವರ ರೈತಪರ ಆಡಳಿತ, ಕಾರ್ಯಕ್ಷಮತೆಗೆ ಕೈಗನ್ನಡಿ
ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಎಂದಕೂಡಲೇ ಕೇಳಿಬರುವ ಹೆಸರುಗಳಲ್ಲಿ ಮೊದಲನೇಯದು ಶ್ರೀಪಾದ ಹೆಗಡೆ ಕಡವೆ. ಕಡವೆಯವರ ಸಹಕಾರಿ ಧೋರಣೆ ಜನಮಾನಸದಲ್ಲಿ ಇಂದಿಗೂ ಅಚ್ಚಾಗಿ ಉಳಿದಿದೆ. ಅವರ ಅಂದಿನ ದೂರದೃಷ್ಟಿಯ ಪರಿಣಾಮವೇ ಹಳ್ಳಿಗಳಲ್ಲಿ ಅಮೃತ ಸಮಾನವಾಗಿರುವ ಸಹಕಾರಿ ಸಂಘಗಳು ಎಂದರೆ ತಪ್ಪಾಗಲಾರದು. ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದು ಸಮಾಜದ ಉನ್ನತ ಹುದ್ದೆ ಏರಿದವರು ಅದೆಷ್ಟೋ ಜನ. ಸಹಕಾರ ಕ್ಷೇತ್ರದಲ್ಲಿಯೂ ಅವರ ಗರಡಿಯಲ್ಲಿ ಪಳಗಿ, ಅವರ ಆದರ್ಶವನ್ನು ಮೈಗೂಡಿಸಿಕೊಂಡು ಬೆಳೆದು, ಸಹಕಾರಿ ವ್ಯವಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಅವರ ಪುತ್ರ ರಾಮಕೃಷ್ಣ ಹೆಗಡೆ ಕಡವೆ ಒಬ್ಬರು.
ದೇಶದ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಎನಿಸಿದ ಟಿಎಸ್ಎಸ್ ನ ಮಾಜಿ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರ ಜೊತೆಗೆ, ದಿ ತೋಟಗಾರ್ಸ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ(ಟಿ.ಆರ್.ಸಿ)ಶಿರಸಿ ಇದರ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಸನ್2005ರಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರ ಕಾರ್ಯವೈಖರಿ ನಿಜಕ್ಕೂ ಅಚ್ಚರಿ.
ಹಿರಿಯ ಸಹಕಾರಿ ಧುರೀಣ ರಾಮಕೃಷ್ಣ ಹೆಗಡೆ ಕಡವೆಯವರ ಸಹಕಾರಿ ಜೀವನವನ್ನು ಗಮನಿಸಿದರೆ ಹಾಡು ಹಕ್ಕಿಗೇಕೆ ಬಿರುದು ಸನ್ಮಾನ ಎಂಬ ಮಾತಿಗೆ ಅನುರೂಪ ಎಂಬುದು ಅವರ ಹತ್ತಿರದ ಒಡನಾಡಿಗಳ ಮಾತಾಗಿದೆ. ಜನಾನುರಾಗಿ ಕಡವೆಯವರ ಬದುಕಿನ ಶೈಲಿಯೂ ಅಷ್ಟೇ ಸರಳ.
ಕಡವೆಯವರ ಕಾರ್ಯ ಶೈಲಿಯ ವೈಶಿಷ್ಟ್ಯಗಳು:
❇️ ಟಿಆರ್ಸಿಯ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, 2005ರಿಂದ ಅಧ್ಯಕ್ಷರಾಗಿ ಸಂಸ್ಥೆಯ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದ್ದು, ರೈತ ಸದಸ್ಯರಿಗೆ ಸರಕಾರದಿಂದ ದೊರೆಯುವ ಬಡ್ಡಿ ಸಹಾಯಧನ, ಬಡ್ಡಿ ರಿಯಾಯತಿಯಂತಹ ಸವಲತ್ತು, ಸೌಲಭ್ಯಗಳನ್ನು ಸಂಪೂರ್ಣವಾಗಿ ಒದಗಿಸಿಕೊಡಲು ಅತ್ಯಂತ ಕಾಳಜಿ ವಹಿಸುತ್ತಿದ್ದಾರೆ.
❇️ ಸಹಕಾರ ತತ್ವದಡಿಯಲ್ಲಿ ನಂಬಿಕೆ ಇರುವ ಹಲವು ರೈತರನ್ನು ಸಂಘದ ಸದಸ್ಯರನ್ನಾಗಿ ಮಾಡಿಕೊಂಡು ಸಹಕಾರಿ ಕ್ಷೇತ್ರವನ್ನು ಬೆಳೆಸುತ್ತಿದ್ದಾರೆ. ತನ್ಮೂಲಕ ರೈತರಿಗೂ ಆರ್ಥಿಕ ಅನುಕೂಲಗಳನ್ನು ಒದಗಿಸಿಕೊಡುತ್ತಿದ್ದಾರೆ. ಜನತಾ ಬಝಾರ್ ಸಂಸ್ಥೆಯ ಆರ್ಥಿಕ ಪುನಶ್ಚೇತನಕ್ಕೂ ಚಾಲನೆ ನೀಡಿದ್ದಾರೆ.
❇️ ಟಿಆರ್ಸಿ ಸಂಸ್ಥೆಯು ಪೂರ್ತಿ ಹಾನಿಯನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ರಾಮಕೃಷ್ಣ ಹೆಗಡೆ ಕಡವೆ ಅದರ ಪುನಶ್ಚೇತನಕ್ಕೆ ಹಗಲಿರುಳೂ ಶ್ರಮವಹಿಸಿ ದುಡಿದು ಒಂದೇ ವರ್ಷದ ಅವಧಿಯಲ್ಲಿ ಹಿಂದಿನ ಎಲ್ಲ ಹಾನಿಗಳನ್ನೂ ಭರಪಾಯಿ ಆಗುವಂತೆ ಮಾಡಿ, ಸಂಘವನ್ನು ಲಾಭದಲ್ಲಿ ಮುನ್ನಡೆಯುವಂತೆ ಮಾಡಿರುವುದು ಅತ್ಯಂತ ಶ್ಲಾಘನೀಯವಾದ ವಿಷಯ. ಈ ಸಂಬಂಧವಾಗಿ ಅನೇಕ ಹೊಸ ಸದಸ್ಯರು ಆಕರ್ಷಿತರಾದ್ದಲ್ಲದೇ ಅವರ ಆರ್ಥಿಕ ಸಮಸ್ಯೆಗಳನ್ನು ಸಹಕಾರ ಮನೋಭಾವದಿಂದ ಬಗೆಹರಿಸುವಲ್ಲಿ ಕಡವೆಯವರ ಪಾತ್ರ ಮಹತ್ವಪೂರ್ಣವಾದದ್ದು ಎಂಬುದು ಸಂಘದ ಸದಸ್ಯರ ಮಾತಾಗಿದೆ.
❇️ ರೈತರ ಹಾಗೂ ಅಡಿಕೆ ಬೆಳೆಗಾರರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಸಂಸ್ಥೆಗಳನ್ನು ಹುಟ್ಟು ಹಾಕಿ ತೋಟಿಗರಿಗೆ ಪ್ರಾತಃಸ್ಮರಣೀಯರಾಗಿ ಅನೇಕ ಸಾಮಾಜಿಕ ಕೆಲಸಗಳನ್ನು ಕೈಗೊಂಡು ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿ ಈಗ ದಿವಂಗತರಾಗಿರುವ ಶ್ರೀಪಾದ ರಾಮಕೃಷ್ಣ ಹೆಗಡೆ ಕಡವೆ ಇವರ ಪುತ್ರ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಇವರು ತಂದೆಯ ಹಾದಿಯಲ್ಲಿಯೇ ಜನರ ಎಲ್ಲ ತೊಂದರೆ ತಾಪತ್ರಯಗಳಲ್ಲಿ ಆರ್ಥಿಕ ತೊಂದರೆಗಳಲ್ಲಿ ಹಗಲಿರುಳೂ ಶಕ್ತಿ ಮೀರಿ ದುಡಿದು, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಅವರು ಪದಾಧಿಕಾರಿಗಳಾಗಿರುವ ಸಂಸ್ಥೆಗಳಲ್ಲಿ ಆಧಾರಸ್ತಂಭರಾಗಿ ಕಾರ್ಯನಿರ್ವಹಿಸುವುದು ಅವರ ವೈಶಿಷ್ಟ್ಯವಾಗಿದೆ.
❇️ ಸನ್ 2019ರ ಮಳೆಗಾಲದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯಗಳನ್ನು ಹಾಗೂ ಜೀವನಾವಶ್ಯಕ ವಸ್ತುಗಳನ್ನು ಸಂಘದ ವತಿಯಿಂದ ನೀಡಲಾಯಿತು.
❇️ ಪ್ರಸ್ತುತ ಉದ್ಭವಿಸಿರುವ ಕೋವಿಡ್-19 ವೈರಾಣು ರೋಗದ ಸಂಬಂಧ ಕೊರೋನಾ ವಾರಿಯರ್ಸಗಳಾದ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ 7 ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ನೀಡಿ ಸನ್ಮಾನಿಸಲಾಯಿತು. ಈ ಎಲ್ಲಾ ಕಾರ್ಯಗಳು ಸಹಕಾರ ವ್ಯವಸ್ಥೆಯ ‘ಸಾಮಾಜಿಕ ಕಳಕಳಿ’ ತತ್ವಕ್ಕೆ ರಾಮಕೃಷ್ಣ ಹೆಗಡೆ ಕಡವೆ ತೋರಿಸಿದ ಕಳಕಳಿಯಾಗಿದೆ. ಸಂಘದಿಂದ ತಮಗೆ ದೊರಕುವ ಗೌರವಧನದ ಬಹುಪಾಲು ರಖಂ ಅನ್ನು ಸಂಕಷ್ಟದಲ್ಲಿರುವ ಸದಸ್ಯರಿಗೆ ಹಾಗೂ ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸುತ್ತಿರುವುದು ಅವರ ಸೇವಾ ಮನೋಭಾವನೆಗೆ ಹಿಡಿದ ಕನ್ನಡಿಯಾಗಿದೆ.
❇️ ದಿ ತೋಟಗಾರ್ಸ್ ರೂರಲ್ ಕೋ-ಆಪ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಲಿ., ಶಿರಸಿ ಇದರ 2007-08ರಲ್ಲಿ ಮತ್ತು ತಾ: 31-03-2018ರಿಂದ ನಿರಂತರವಾಗಿ ಮೆಂಬರರ ಮಟ್ಟದಲ್ಲಿ ಶೇ.100ರಷ್ಟು ಸಾಲ ವಸೂಲಾಗಿರುತ್ತದೆ. ಹಾಗೂ ಬ್ಯಾಂಕಿನ ಮಟ್ಟದಲ್ಲಿ ನೂರಕ್ಕೆ ನೂರು ಸಾಲ ಮರುಪಾವತಿಸಲಾಗಿದೆ. ಸದಸ್ಯರ ಸಾಲ ವಸೂಲಾತಿಯಲ್ಲಿ ಯಾವುದೇ ಕಠಿಣ ಕಾನೂನು ಕ್ರಮ ಅನುಸರಿಸದೇ ಸದಸ್ಯರ ಮನವೊಲಿಸಿ ತಿಳಿ ಹೇಳಿ ಸಾಲ ಮರುಪಾವತಿಯಾಗುವಂತೆ ಮಾಡಿದ ಪೂರ್ತಿ ಯಶಸ್ಸು ರಾಮಕೃಷ್ಣ ಕಡವೆ ಅವರಿಗೆ ಸಲ್ಲುತ್ತದೆ.
❇️ ಸನ್ 2004-05ರಲ್ಲಿ ರಾಜ್ಯ ಸರ್ಕಾರದ ಬಡ್ಡಿ ಮನ್ನಾ ಯೋಜನೆಯಲ್ಲಿ ರೂ.33,82,120/-, ಸನ್ 2005-06ರಲ್ಲಿ ರೂ.61,63,611/-, 2006-07ರಲ್ಲಿ ರೂ.3,33,20,707/-ಸಾಲ ಹಾಗೂ ಬಡ್ಡಿಮನ್ನಾ ಹಾಗೂ 2018-19 ನೇ ಸಾಲಿನಲ್ಲಿ ರಾಜ್ಯ ಸರಕಾರವು ಘೋಷಿಸಿದ ಸಾಲಮನ್ನಾ ಯೋಜನೆಯಲ್ಲಿ ರೂ.10 ಕೋಟಿಗೂ ಮೀರಿ ಬೆಳೆಸಾಲ ಮನ್ನಾ ಸೌಲಭ್ಯ ರಾಮಕೃಷ್ಣ ಹೆಗಡೆ ಕಡವೆಯವರು ಅಧ್ಯಕ್ಷರಾಗಿರುವ ಟಿ.ಆರ್.ಸಿ ಸಂಘದ ಸದಸ್ಯರಿಗೆ ದೊರಕಿರುವುದು ವೈಶಿಷ್ಟ್ಯವಾಗಿದೆ. ತಾವು ಅಧ್ಯಕ್ಷರಾಗಿರುವ ಟಿ.ಆರ್.ಸಿ ಸೊಸೈಟಿಯ ಮೂಲಕ ರೂ. 32 ಕೋಟಿಗೂ ಮೀರಿ ಎಸ.ಕೆ.ಸಿ.ಸಿ ಸಾಲವನ್ನು ಸದಸ್ಯರಿಗೆ ನೀಡುವ ಮೂಲಕ ರಾಜ್ಯದಲ್ಲಿಯೇ ಹೆಚ್ಚಿನ ಪ್ರಮಾಣದ ಬೆಳೆಸಾಲ ನೀಡುವ ಸಹಕಾರ ಸಂಸ್ಥೆಗಳಲ್ಲಿ ಒಂದಾಗುವಂತೆ ಸಂಘದ ಕಾರ್ಯವ್ಯವಹಾರ ಕೈಗೊಂಡಿರುವುದು ವಿಷೇಶವಾಗಿದೆ.
❇️ ಕೃಷಿಯನ್ನು ಪ್ರೋತ್ಸಾಹಿಸಲು ರೈತಕೂಟಗಳನ್ನು ರಚಿಸಿ, ತನ್ಮೂಲಕ “ಕೃಷಿಕ್ಷೇತ್ರದರ್ಶನ” ಕಾರ್ಯಕ್ರಮ ಕೈಗೊಂಡು ಆಧುನಿಕ ಕೃಷಿ ಪದ್ಧತಿಯನ್ನು ಸದಸ್ಯರು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ. ಸದಸ್ಯರಿಗೆ ಆರೋಗ್ಯವಿಮೆ ಜಾರಿಗೊಳಿಸಿದ್ದು, ಪ್ರಧಾನಮಂತ್ರಿ ಭಿಮಾ ಯೋಜನೆಗೆ ಒಳಪಡದ ಸದಸ್ಯರನ್ನು ಈ ಯೋಜನೆಗೆ ಒಳಪಡಿಸಿ ಸಂಘದಿಂದಲೇ ಪ್ರೀಮಿಯಂ ಹಣವನ್ನು ತುಂಬಿಕೊಟ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.
ಕಳೆದ ಮೂರಕ್ಕೂ ಅಧಿಕ ದಶಕಗಳಿಂದ ಸಹಕಾರಿ ಕ್ಷೇತ್ರದ ವಿವಿಧ ಮಜಲುಗಳನ್ನು ದಾಟಿ, ಇಂದು ಜಿಲ್ಲೆಯಲ್ಲಿಯೇ ಅಗ್ರಗಣ್ಯ ಸಹಕಾರಿಯಾಗಿರುವ ರಾಮಕೃಷ್ಣ ಹೆಗಡೆ ಕಡವೆಯವರು ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅದರ ಮಾಹಿತಿ ಈ ಕೆಳಗಿನಂತಿದೆ.
ಸಹಕಾರ ಕ್ಷೇತ್ರ:
➡️ ರಾಜ್ಯದ ಪ್ರತಿಷ್ಟಿತ ಸಹಕಾರ ಸಂಸ್ಥೆಯಾದ ದಿ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯ(ಟಿ.ಎಸ್.ಎಸ್)ಶಿರಸಿ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
➡️ ದಿ ಅಗ್ರಿಕಲ್ಚರಲ್ ಸರ್ವೀಸ್ ಆಂಡ್ ಡೆವಲಪ್ಮೆಂಟ್ ಕೋ-ಆಪರೇಟಿವ್ ಸೊಸೈಟಿ ಶಿರಸಿ ಇದರ 1995ರಿಂದ2001ರ ವರೆಗೆ ನಿರ್ದೇಶಕರಾಗಿ ಹಾಗೂ 2001 ರಿಂದ 2005ರ ವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
➡️ ‘ಉತ್ತರ ಕನ್ನಡ ಜಿಲ್ಲೆಯ ಕೃಷಿ ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್’ ಇದರ ಅಧ್ಯಕ್ಷರಾಗಿ ಸನ್ 2010 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
➡️ ದಿ ಅಗ್ರಿಕಲ್ಚರಲ್ ಪ್ರೋಡ್ಯೂಸ್ ಮಾರ್ಕೆಟಿಂಗ್ ಎಂಡ್ ಪ್ರೊಸೆಸ್ಸಿಂಗ್ ಸೊಸೈಟಿ ಶಿರಸಿ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
➡️ ದಿ ಸೆಂಟ್ರಲ್ ಕೋ-ಆಪ್ ಹೋಲ್ ಸೇಲ್ ಸ್ಟೋರ್ಸ ಲಿ; ಶಿರಸಿ ಇದರ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜಿಲ್ಲೆಯ ಸಹಕಾರಿ ಕ್ಷೇತ್ರದ ಬೆನ್ನೆಲುಬಾಗಿರುವ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕಡವೆಯವರ ಮಗನಾಗಿ, ಅವರ ಹಾದಿಯಲ್ಲಿಯೇ ನಡೆದ ಸಹಕಾರಿ:
ಪ್ರತಿಷ್ಟಿತ ಕಡವೆ ಕುಟುಂಬದಲ್ಲಿ ಜನಿಸಿ, ಸಹಕಾರಿ ಧುರೀಣ ಕಡವೆ ಶ್ರೀಪಾದ ಹೆಗಡೆ ಅವರ ಮಗನಾಗಿ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿಯೇ ನಡೆದ ರಾಮಕೃಷ್ಣ ಹೆಗಡೆ ಕಡವೆಯವರು, ತಮ್ಮ ರೈತಪರ ವಿಚಾರ, ಕಾರ್ಯದ ಮೂಲಕವೇ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಯಾವುದೋ ಅಧಿಕಾರದ ದುರಾಸೆ, ಸ್ವಾರ್ಥದ ಕಾರಣಕ್ಕೆ ಸಹಕಾರಿ ಕ್ಷೇತ್ರಕ್ಕೆ ಹಿಂಬಾಗಿಲ ಮೂಲಕ ಬಂದವರಲ್ಲ. ಬದಲಾಗಿ ಸಂಸ್ಥೆಯ ಸದಸ್ಯನಾಗಿ, ನಿರ್ದೇಶಕನಾಗಿ, ಉಪಾಧ್ಯಕ್ಷ, ಅಧ್ಯಕ್ಷ ಹೀಗೆ ಎಲ್ಲ ವಿಭಾಗದಲ್ಲಿಯೂ ಹಂತ ಹಂತವಾಗಿ ಬೆಳೆದು ಬಂದವರು. ಒಂದರ್ಥದಲ್ಲಿ ರೈತರೇ ಇವರನ್ನು ಬೆಳೆಸಿದವರು. ಮಾತು ಕಡಿಮೆ, ರೈತಪರ ನಿರ್ಣಯ ಜಾಸ್ತಿ. ರೈತರ ಒಳಿತಿನ ಹೊರತಾಗಿ ಬೇರೇನೂ ಯೋಚಿಸದ ಕಾಯಕ ಯೋಗಿ ರಾಮಕೃಷ್ಣ ಹೆಗಡೆಯವರು. ತಮ್ಮ ಮೇಲೆ ಬಂದ ಆರೋಪ, ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಆರೋಪ ಮುಕ್ತರಾಗಿ ನಿಂತವರು. ಪ್ರಸ್ತುತ ಟಿಆರ್ಸಿ ಸಂಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದು ಕಡವೆಯವರ ಕಾರ್ಯಕ್ಷಮತೆ, ರೈತಪರ ನಿಲುವಿಗೆ ಮತ್ತು ಅವರ ದಕ್ಷ, ಪ್ರಾಮಾಣಿಕ ಆಡಳಿತಕ್ಕೆ ಸಂದ ಗೌರವ ಎಂದರೆ ತಪ್ಪಾಗಲಾರದು.