ಶಿರಸಿ: ಉದ್ಯೋಗ ಖಾತರಿ ಯೋಜನೆಯಡಿ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಲು ಗ್ರಾಮ ಪಂಚಾಯತ್ ಸದಾಕಾಲ ಸಿದ್ದವಾಗಿರುತ್ತದೆ. ವೈಯಕ್ತಿಕ ಹಾಗೂ ಸಾಮೂದಾಯಿಕ ಕಾಮಗಾರಿಗಳಲ್ಲಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳೋಣ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪ ಎಮ್ ಮಳಗ್ಯಾನವರ ತಿಳಿಸಿದರು.
ಅವರು ಗುರುವಾರ ಶಿರಸಿ ತಾಲೂಕಿನ ಹುಣಸೆಕೊಪ್ಪ ಗ್ರಾಮ ಪಂಚಾಯತ್ನ ಹುಣಸೆಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಜಾನುವಾರು ಕಂದಕ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ “ರೋಜಗಾರ್ ದಿನ” ಆಚರಿಸಿ ಮಾತನಾಡಿದ ಅವರು ಕೂಲಿಕಾರರು ಕಾಮಗಾರಿಯನ್ನು ಯಾಕೆ ಮಾಡಬೇಕು. ಕಾಮಗಾರಿಯನ್ನು ಕೈಗೊಳ್ಳುವಾಗ ಗಮನಿಸಬೇಕಾದ ಅಂಶಗಳ ಕುರಿತು ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿ ಮಣ್ಣಿನ ಸವಕಳಿ ತಡೆ, ಜಾನುವಾರು ಹಾಗೂ ಕಾಡು ಪ್ರಾಣಿಗಳ ಹಾವಳಿ ತಡೆಯಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಪ್ರದೇಶಗಳಲ್ಲಿ ಜಾನುವಾರು ಕಂದಕ ಕಾಮಗಾರಿ ಕೈಗೊಳ್ಳಲಾಗಿದೆ. ಅಂದಾಜು 1ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಆರಂಭಿಸಲಾಗಿದ್ದು ಈವರೆಗೆ 35 ಮಾನವ ದಿನಗಳ ಸೃಜನೆಯೊಂದಿಗೆ 11,060 ರೂ ಕೂಲಿ ನೀಡಲಾಗಿದೆ.
ನರೇಗಾ ಯೋಜನೆಯಡಿ ಎನ್ ಎಮ್ ಎಮ್ ಎಸ್ ಆ್ಯಪ್ ಬಳಕೆಯ ಉದ್ದೇಶ, ಫೋಟೋಗಳನ್ನು ಹೇಗೆ ಮಾಡಬೇಕು. ಫೋಟೋ ಸಮೇತ ಹಾಜರಾತಿ ನೀಡದಿದ್ದರೆ ಕೂಲಿಕಾರರು ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಹಾಗೂ ಕೂಲಿಕಾರರಿಗೆ ನೀಡಲಾಗುವ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಾಲೂಕು ಪಂಚಾಯತ್ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ರಜನಿ ಹೆಗಡೆ, ಬಿಎಪ್ ಟಿ ಪ್ರಸನ್ನ ಹೆಗಡೆ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ನಾಗರಾಜ್ ಗೌಡ, ತಿಮ್ಮಣ್ಣ ಹಾಜರಿದ್ದರು.