ಮುಂಡಗೋಡ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಾಹಾತ್ಮ ಗಾಂಧಿ ನರೇಗಾದಡಿ ಪ್ರಾರಂಭಿಸುವ ಸಮುದಾಯ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕೆಲಸ ನಿರ್ವಹಿಸುವಂತೆ ಗ್ರಾಮೀಣ ಕೂಲಿಕಾರರನ್ನು ಪ್ರೇರೆಪಿಸುವ ಉದ್ದೇಶದಿಂದ, ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಕೋಡಂಬಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಾಪುರ ಗ್ರಾಮದ ಅರಣ್ಯ ಪ್ರದೇಶದ ಸರ್ವೆ ನಂ. 07 ರಲ್ಲಿ ಗ್ರಾಮ ಪಂಚಾಯತಿ ಹಾಗೂ ಅರಣ್ಯ ಇಲಾಖೆ ಒಗ್ಗೂಡಿಸುವಿಕೆಯಡಿ ಅಂದಾಜು 3 ಲಕ್ಷ ರೂ ವೆಚ್ಚದಲ್ಲಿ 400 ಕಾಂಟೂರ ಟ್ರಂಚ್ ತೆಗೆಯುವ ಕಾಮಗಾರಿ ಪ್ರಾರಂಭಿಸಲಾಗಿದೆ.
ಕಾಮಗಾರಿ ಸ್ಥಳದಲ್ಲಿ ತಾಲ್ಲೂಕು ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ರವರು ಮಂಗಳವಾರ ಐಇಸಿ ಚಟುವಟಿಕೆಗಳಡಿ ರೋಜಗಾರ ದಿವಸ ಆಚರಣೆ ಹಾಗೂ ನರೇಗಾ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಟೂರ ಟ್ರಂಚ್ ತೆಗೆಯುವ ಕಾಮಗಾರಿ ಮುಗಿದ ನಂತರ , ಗ್ರಾಮ ಪಂಚಾಯತಿಯಿಂದ ಮಳೆನೀರು ಕೋಯ್ಲು, ಕೊಳವೆ ಬಾವಿ ಮರುಪೂರಣ ಘಟಕ, ಕೆರೆ ಕಾಮಗಾರಿಯಂತಹ ಸಮುದಾಯ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರ ಬೇಡಿಕೆಯಂತೆ ನಿರಂತರ ಕೂಲಿ ಕೆಲಸ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಗ್ರಾಮೀಣ ಭಾಗದ ಪ್ರತಿಯೊಬ್ಬರೂ ನರೇಗಾದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹಳ್ಳಿಗಾಡು ಬಡ ಜನರಿಗೆ ಗ್ರಾಮ ಪಂಚಾಯತಿಯಿಂದ ನರೇಗಾದಡಿ ಕೂಲಿ ಕೆಲಸದ ಜೊತೆಗೆ ವೈಯಕ್ತಿಕ ಕಾಮಗಾರಿ ವಿಭಾಗದಲ್ಲಿ ಅಡಿಕೆ, ಪಪ್ಪಾಯಿ, ಮಾವು, ಚಿಕ್ಕು, ದಾಳಿಂಬೆ, ಪೇರಲು, ಕಾಳು ಮೆಣಸು, ಗುಲಾಬಿ, ಮಲ್ಲಿಗೆ, ಡ್ರ‍್ಯಾಗನ್ ಫ್ರೂಟ್ ಬೆಳೆಗಳು, ಮಳೆ ನೀರು ಕೋಯ್ಲು, ಕೊಳವೆ ಬಾವಿ ಮರುಪೂರಣ ಘಟಕ, ಕೃಷಿ ಬಾವಿ, ದನ, ಕೋಳಿ, ಕುರಿ, ಮೇಕೆ ಶೆಡ್ ನಿರ್ಮಾಣದಂತಹ ಕಾಮಗಾರಿಗಳು ಲಭ್ಯವಿದ್ದು, ಗ್ರಾಮಸ್ಥರು ಸ್ವಇಚ್ಛೆಯಿಂದ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್‌ಎಫ್‌ಒ ಸುನಿಲ್ ಆರ್ ಹೊನ್ನಾವರ, ತಾಂತ್ರಿಕ ಸಹಾಯಕ ಅಭಿಯಂತರ ಬಸವರಾಜ ಪಾಟೀಲ, ಗ್ರಾಪಂ ಸಿಬ್ಬಂದಿ , ಅರಣ್ಯ ಇಲಾಖೆ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.