ಶಿರಸಿ: ಇತ್ತೀಚೆಗೆ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಸಿಆರ್ಪಿಎಫ್ನಲ್ಲಿ ಸೆಕೆಂಡ್ ಇನ್ ಕಮಾಂಡೆಂಟ್ ಆಗಿರುವ ಮಹೇಂದ್ರ ಹೆಗಡೆ ಗೋಳಿ ಇವರು ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತ ಕೇವಲ ಇಂಜಿನಿಯರ್ ಅಥವಾ ಡಾಕ್ಟರ ಅಷ್ಟೇ ಅಲ್ಲದೇ ಸಮಾಜ ಸೇವೆ ಮಾಡುವ ಇನ್ನೂ ಅನೇಕ ಕ್ಷೇತ್ರಗಳಿದ್ದು ಅದಕ್ಕೆ ಸಿದ್ದರಾಗಿ ಎಂದರು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ವಿವಿಧ ಹುದ್ದೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಅಲ್ಲದೆ ನಮ್ಮ ರಕ್ಷಣಾ ವ್ಯವಸ್ಥೆಯ ಬಗ್ಗೆ ವಿವರಿಸಿದರು.
ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ. ಹೆಗಡೆ ಇವರು ಮಹೇಂದ್ರ ಹೆಗಡೆ ಇವರನ್ನು ಪರಿಚಯಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ ಭಟ್ಟ ವಾನಳ್ಳಿ ಎಲ್ಲರನ್ನು ಸ್ವಾಗತಿಸಿ, ಇದು ನಮ್ಮ ಶಾಲೆಯ ಒಂದು ವಿನೂತನ ಪ್ರಯೋಗ ಮಾಡಿದೆ. ಇದರಿಂದ ಈಗಲೇ ಮಕ್ಕಳಿಗೇ ಒಂದು ಗುರಿ ಹೊಂದಲು ಸಾಧ್ಯ ಎಂದರು. ಅಲ್ಲದೆ ಶಾಲಾ ಅವಧಿ ನಂತರ ಎಲ್ಲರ ಸಹಕಾರದಿಂದ ತರಬೇತಿ ನೀಡುವ ಉದ್ದೇಶ ಇದೆ ಎಂದರು.
ಕಾರ್ಯದರ್ಶಿಗಳಾದ ಶ್ರೀಧರ್ ನಾಯಕ್ ಇವರು ಮಾತನಾಡಿ, ನಮ್ಮ ಸಂಸ್ಧೆ ವಿದ್ಯಾರ್ಥಿ ಗಳ ಹಿತಕ್ಕಾಗಿ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಾಗೂ ಪ್ರತಿ ತಿಂಗಳು ಒಬ್ಬ ಸಂಪನ್ಮೂಲ ವ್ಯಕ್ತಿಗಳಿಂದ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತೇವೆ. ಹಾಗೂ ಗಣೇಶ್ ಸಾಯೀಮನೆ ಇವರನ್ನು ನೂಡಲ್ ಶಿಕ್ಷಕರಾಗಿಸಿ ಎಲ್ಲಾ ಶಿಕ್ಷಕರ ಸಹಕಾರ ಪಡೆದು ಇದನ್ನು ನಡೆಸುವ ಇರಾದೆ ಇದೆ ಎಂದರು ಕನಿಷ್ಠ ಒಬ್ಬ ವಿದ್ಯಾರ್ಥಿ ಪ್ರಯೋಜನ ಪಡೆದು ಈ ಕ್ಷೇತ್ರಕ್ಕೆ ಬಂದರೆ ನಮ್ಮ ಕೆಲಸ ಸಾರ್ಥಕ ಎಂದರು. ಗಣೇಶ್ ಸಾಯಿಮನೆ ನಿರ್ವಹಿಸಿ ವಂದಿಸಿದರು.