ಚಲನಚಿತ್ರ ನಟ ರಿಷಭ್ ಶೆಟ್ಟಿ ಉಪಸ್ಥಿತಿಯಲ್ಲಿ ಸನ್ಮಾನ
ದಾಂಡೇಲಿ : ಉಡುಪಿ ಜಿಲ್ಲೆಯ ಕುಂದಗನ್ನಡ ಭಾಷೆಯ ಅಸ್ತಿತ್ವವನ್ನು ಉಳಿಸಿ, ಬೆಳೆಸುವ ಮಹತ್ವಕಾಂಕ್ಷಿ ಉದ್ದೇಶದಿಂದ ಕಳೆದ 5 ವರ್ಷಗಳಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು. ಈ ವರ್ಷ ಕುಂದಾಪ್ರ ಕನ್ನಡ ದಿನಾಚರಣೆಯ ನಿಮಿತ್ತ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ʼಕುಂದಾಪ್ರ ಕನ್ನಡ ಹಬ್ಬʼವನ್ನು ಬೆಂಗಳೂರಿನ ಅರಮನೆ ಮೈದಾನ ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ನಗರದ ಕವಯಿತ್ರಿ ಆಗಿರುವ ಅಶ್ವಿನಿ ಸಂತೋಷ್ ಶೆಟ್ಟಿಯವರು ಕುಂದಾಪ್ರ ಭಾಷೆಯಲ್ಲಿ ಬರೆದ ಎರಡು ಕವಿತೆಗಳನ್ನು ಹಾಡಲಾಯಿತು. ಸೊಗಸಾದ ಗೀತೆ, ಕುಂದಾಪುರದ ಜನಜೀವನ, ಸಂಸ್ಕೃತಿ, ಹಬ್ಬ ಹರಿದಿನಗಳ ಆಚರಣೆ, ಕಟ್ಟಿಕೊಡುವ ನಮ್ಮೂರು – ನಮ್ಮ ಭಾಷೆ ಮತ್ತು ಕಾರ್ತಿಂಗಳು ಶಿರ್ಷಿಕೆಯ ಎರಡು ಗೀತೆಗಳಿಗೆ ಬನವಾಸಿಯ ಅರ್ಜುನ್ ಅವರ ರಾಗ ಸಂಯೋಜನೆಯಲ್ಲಿ ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್ ಇದರ ಗಾಯಕಿ ಕುಂದಾಪುರದ ಮೇಘನಾ ಹಾಗೂ ತಂಡದವರು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಹಾಡಿನ ಪದಗಳ ಸಂಯೋಜನೆ, ರಾಗ, ತಾಳವನ್ನು ಮೆಚ್ಚಿದ ಪ್ರೇಕ್ಷಕರು ಚಲನ ಚಿತ್ರ ನಟ ರಿಷಬ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಆಗಮಿಸಿದ ನಂತರ ಮತ್ತೊಮ್ಮೆ ಹಾಡುವಂತೆ ವಿನಂತಿಸಿದ ಬಳಿಕ ಇನ್ನೊಮ್ಮೆ ಆ ಹಾಡನ್ನು ಪ್ರಸ್ತುತಪಡಿಸಲಾಯಿತು.
ಆನಂತರದಲ್ಲಿ ಕವಯಿತ್ರಿ ಅಶ್ವಿನಿ ಸಂತೋಷ್ ಶೆಟ್ಟಿ ಅವರನ್ನು ನಟ ರಿಶಭ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಗಾಯಕಿ ಮೇಘನಾ ಹಾಗೂ ಅವರ ತಂಡದವರು ಗೌರವಿಸಲಾಯಿತು.
ಮೂಲತ: ಕುಂದಾಪುರದವರಾದ ಅಶ್ವಿನಿ ಸಂತೋಷ ಶೆಟ್ಟಿ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು. ಕೆಲ ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆಯನ್ನು ಸಲ್ಲಿಸಿದವರು.
ಈಗಾಗಲೇ ಕುಂದಾಪುರ ಭಾಷೆಯಲ್ಲಿ 20ಕ್ಕೂ ಹಾಗೂ ಕನ್ನಡದಲ್ಲಿ 25ಕ್ಕೂ ಅಧಿಕ ಹಾಡುಗಳನ್ನು ರಚಿಸಿರುವ ಅಶ್ವಿನಿ ಸಂತೋಷ ಶೆಟ್ಟಿ ಅವರು ಸಾಮಾಜಿಕ ವಿಚಾರಧಾರೆಯನ್ನು ಇಟ್ಟುಕೊಂಡು ಕೃತಿಯೊಂದನ್ನು ಬರೆಯುತ್ತಿದ್ದಾರೆ. ಸದ್ದು ಮತ್ತು ಸುದ್ದಿ ಇಲ್ಲದೆ, ಪ್ರಚಾರದ ಹಮ್ಮು ಬಿಮು ಇಲ್ಲದೆ ತನ್ನದೇ ಆದ ರೀತಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಶ್ವಿನಿ ಸಂತೋಷ ಶೆಟ್ಟಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ಇನ್ನಷ್ಟು ಕೊಡುಗೆಯನ್ನು ಕೊಡುವಂತಾಗಲಿ ಎನ್ನುವ ಆಶಯ ಮತ್ತು ಹಾರೈಕೆ ನಮ್ಮಲ್ಲೆರದ್ದಾಗಿದೆ.