Slide
Slide
Slide
previous arrow
next arrow

ಕನಸು ಕಾಣುವುದು ಸುಲಭ, ನನಸಾಗಿಸಲು ಕಠಿಣ ಶ್ರಮ ಅಗತ್ಯ: ಬಿಇಒ ನಾಗರಾಜ ನಾಯ್ಕ್

300x250 AD

ಶಿರಸಿ: ನಾವಿರುವ ಸ್ಥಳಗಳಲ್ಲಿನ, ನಮ್ಮ ಸುತ್ತಮುತ್ತಲಿನ ಸೂಕ್ಷ್ಮ ವಿಷಯಗಳನ್ನು ಗಮನಿಸುವುದು ಐಎಎಸ್, ಕೆಎಎಸ್‌ನ ಮೊದಲ ಹೆಜ್ಜೆಯಾಗಿದೆ ಎಂದು ಶಿರಸಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ನಾಯ್ಕ್ ಹೇಳಿದರು.

ನಗರದ ಎಂಇಎಸ್ ಚೈತನ್ಯ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಮುತ್ಕರ್ಷ ಪ್ರಿ-ಐಎಎಸ್ ಫೌಂಡೇಶನ್ ತಗರತಿಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕನಸು ಕಾಣುವುದು ಸುಲಭ. ಆದರೆ ಕಂಡ ಕನಸನ್ನು ನನಸಾಗಿಸಲು ಕಠಿಣ ಶ್ರಮ ಅಗತ್ಯ. ಪ್ರಾರಂಭದಿಂದಲೇ ಕಂಡ ಕನಸಿನ ಬೆನ್ನತ್ತಿ, ಅದಕ್ಕೆ ತಕ್ಕ ಕಲಿಕೆಯನ್ನು ಪ್ರಾರಂಭಿಸಿದರೆ, ಗುರಿ ಮುಟ್ಟಲು ಸಾಧ್ಯ. ಆದರೆ ಕೇವಲ ತಗರತಿಗಳಲ್ಲಿ ಕುಳಿತು ಪಠ್ಯಕ್ಕೆ ಸೀಮಿತವಾದದ್ದನ್ನು ಕಲಿತರೆ ಸಂಪೂರ್ಣ ಪ್ರಯೋಜನ ದೊರಕುವುದಿಲ್ಲ. ಆಟೋಟಗಳಲ್ಲಿ ಭಾಗವಹಿಸುವಿಕೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕೂಡಾ ಕಲಿಕೆಯ ಭಾಗವಾಗಿದೆ ಎಂದರು.

ಒಬ್ಬ ಸಮರ್ಥ ಅಧಿಕಾರಿಯಾಗಬೇಕೆಂದರೆ ಆತನಿಗೆ ಪ್ರತಿ ಕ್ಷೇತ್ರಗಳ ಪರಿಚಯವಿರಬೇಕು. ಕಲೆ, ಸಾಹಿತ್ಯ, ಸಂಗೀತ, ‌ಕ್ರೀಡೆ, ಹೀಗೆ ಪ್ರತಿ ವಿಷಯಗಳಲ್ಲಿ ಮಾಹಿತಿ ಪಡೆದುಕೊಂಡು, ಭಾಗವಹಿಸಿ ಜ್ಞಾನವನ್ನು ಪಡೆದುಕೊಳ್ಳಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಿ, ಪ್ರತಿನಿತ್ಯ ದಿನಪತ್ರಿಕೆ ಓದುವುದನ್ನು ರೂಡಿಸಿಕೊಳ್ಳಿ. ಮನುಷ್ಯ ತನ್ನಲ್ಲಿರುವ ಭಯವನ್ನು ಹೋಗಲಾಡಿಸಿಕೊಂಡಾಗ ಮಾತ್ರ ಗೆಲ್ಲಲು ಸಾಧ್ಯ. ಅದೇರೀತಿ ಮಕ್ಕಳು ನಿಮ್ಮಲ್ಲಿರುವ ಭಯವನ್ನು ಬಿಟ್ಟು, ಪ್ರತಿ ಚಟುವಟಿಕೆಗಳಲ್ಲಿ ಭಾಗವಹಿಸಿ, ನಿಮ್ಮ ಕನಸನ್ನು ನನಸಾಗಿಸಲು ಸತತ ಪ್ರಯತ್ನಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

300x250 AD

ಅತಿಥಿಗಳಾಗಿ ಆಗಮಿಸಿದ್ದ ಕೆ.ಬಿ.ಲೋಕೇಶ್ ಹೆಗಡೆ ಮಾತನಾಡಿ, ಚಿಕ್ಕಂದಿನಲ್ಲಿ ಮಕ್ಕಳಲ್ಲಿ ಏನನ್ನು ಬಿತ್ತುತ್ತೇವೋ ಅದೆ ಹೆಮ್ಮರವಾಗಿ ಬೆಳೆಯುತ್ತದೆ. ಉತ್ತರ ಭಾರತದ ಭಾಗಗಳಲ್ಲಿ ಹೆಚ್ಚೆಚ್ಚು ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗುತ್ತಾರೆ. ಅಧಿಕಾರಿಗಳಾಗುತ್ತಾರೆ. ಅದಕ್ಕೆ ಕಾರಣ ಚಿಕ್ಕಂದಿನಿಂದಲೇ ಅಂತಹ ಸಂಸ್ಕಾರವನ್ನು ನೀಡಿ ಮಕ್ಕಳನ್ನು ಬೆಳೆಸಲಾಗುತ್ತದೆ. ಉತ್ತಮ ತರಬೇತಿಗಳನ್ನು ನೀಡಲಾಗುತ್ತದೆ. ಆದರೆ ನಮ್ಮ ಕಡೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹ, ಸರಿಯಾದ ತರಬೇತಿಗಳು ದೊರಕದೇ ಅವಕಾಶ ವಂಚಿತರಾಗುತ್ತಿದ್ದಾರೆ. ಆದರೆ ಈಗ ನಮ್ಮ ಶಿರಸಿಯಲ್ಲೇ ಸಮುತ್ಕರ್ಷ ತರಗತಿಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಇನ್ನೋರ್ವ ಅತಿಥಿಗಳಾದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ ಮಾತನಾಡಿ, ದೇಶವನ್ನು ನಿಜವಾಗಿಯೂ ಆಳುವವರು ರಾಜಕಾರಣಿಗಳಲ್ಲ. ಉತ್ತಮ ಸಂಸ್ಕಾರ,ವಿದ್ಯೆ ಪಡೆದು ಉತ್ತಮ ಅಧಿಕಾರಿಗಳ ತಂಡವಿದ್ದರೆ ಮಾತ್ರ ಆಡಳಿತ ನಡೆಸಲು ಸಾಧ್ಯ. ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಉತ್ತಮ‌ ಅಧಿಕಾರಿಗಳಾಗಲು ಸಾಧ್ಯವಿಲ್ಲ. ಉತ್ತಮ ಸಂಸ್ಕಾರ, ಸಮಯ ಪ್ರಜ್ಞೆ, ಶಿಸ್ತುಗಳನ್ನು ರೂಢಿಸಿಕೊಂಡರೆ ಮಾತ್ರ ಗೆಲುವು ಸಾಧ್ಯ. ಸಂಸ್ಕಾರಯುತ ಶಿಕ್ಷಣ ನೀಡುವ ಸಮುತ್ಕರ್ಷ ತರಗತಿಗಳ ಪ್ರಯೋಜನ ಪಡೆದು, ಅವೆಲ್ಲವನ್ನು ಅಳವಡಿಸಿಕೊಂಡು, ಗುರಿಯನ್ನು ತಲುಪಿ ಪ್ರಾಮಾಣಿಕತೆ, ದಕ್ಷ ಆಡಳಿತ, ಸಂಸ್ಕಾರವಂತ ಆಡಳಿತಗಾರರಾಗಿ ದೇಶಕ್ಕೆ‌ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಎಂಇಎಸ್ ಚೈತನ್ಯ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಾಘವೇಂದ್ರ ಹೆಗಡೆಕಟ್ಟೆ ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅನಿಲ್ ನಾಯಕ್ ಸ್ವಾಗತಿಸಿದರೆ, ಶಿರಸಿ ಸಮುತ್ಕರ್ಷ ಮುಖ್ಯಸ್ಥರಾದ ಪವನ್ ಹೆಗಡೆ ವಂದಿಸಿದರು. ಸಂಧ್ಯಾ ಶಾಸ್ತ್ರೀ ಕಾರ್ಯಕ್ರಮವನ್ನು ನಿರ್ವಹಿಸಿದರು.

Share This
300x250 AD
300x250 AD
300x250 AD
Back to top