ಶಿರಸಿ: ಮೊಬೈಲ್ ಸೇರಿದಂತೆ ದುರ್ವ್ಯಸನದಿಂದ ಮಕ್ಕಳನ್ನು ಹೊರತರುವ ಕೆಲಸ ಆಗಬೇಕಿದ್ದು, ಆ ನಿಟ್ಟಿನಲ್ಲಿ ಯಕ್ಷಗಾನ ಪರಿಣಾಮ ಬೀರಬೇಕು. ತಾಳಮದ್ದಲೆ, ಯಕ್ಷಗಾನದ ಕಲಿಕೆ ಕೇವಲ ಸ್ಪರ್ಧೆ, ಪ್ರಶಸ್ತಿಗೆ ಸೀಮಿತವಾಗಬಾರದು. ನಿತ್ಯ ಕಲಿಕೆಯಲ್ಲಿ ಇರಬೇಕು. ಯಕ್ಷಗಾನವೂ ಬೆಳೆಯಲಿ ಜೊತೆಗೆ ಮಕ್ಕಳೂ ಬೆಳೆಯಲಿ ಎಂದು ಸ್ವರ್ಣವಲ್ಲೀ ಪೀಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಶೀರ್ವದಿಸಿ ನುಡಿದರು.
ಅವರು ಭಾನುವಾರ ಶ್ರೀಸ್ವರ್ಣವಲ್ಲೀಯಲ್ಲಿ ನಡೆದ ಯಕ್ಷ ಶಾಲ್ಮಲಾದ ದ್ವಿದಶಮಾನೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಯಕ್ಷೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವದಿಸಿದರು.
ವ್ಯಕ್ತಿಯನ್ನು ವ್ಯವಹಾರಿಕ ಚಿಂತನೆಯಿಂದ ಪುರಾಣ ಕಾಲಕ್ಕೆ ಒಯ್ಯುವ ಕೆಲಸ ಯಕ್ಷಗಾನ ಮಾಡುತ್ತದೆ. ವರ್ತಮಾನದಿಂದ ಪುರಾಣದೆಡೆಗೆ ತೆಗೆದುಕೊಂಡುವ ಹೋಗುವ ಏಕೈಕ ಮಾಧ್ಯಮ ವಿಶ್ವದಲ್ಲಿದ್ದರೆ ಅದು ಯಕ್ಷಗಾನ ಮಾತ್ರ. ಇಂತಹ ದಿವ್ಯವಾದ ಕಲೆ ಉಳಿಯಬೇಕು, ಬೆಳೆಯಬೇಕಿದೆ. ಇಂದು ಮಕ್ಕಳ ಮೇಲೆ ಯಕ್ಷಗಾನ ಪ್ರಭಾವ ಬೀರಬೇಕಿದೆ ಎಂದರು.
ಶ್ರೀಮಠದ ಕಿರಿಯ ಶ್ರೀಗಳಾದ ಶ್ರೀಮದ್ ಆನಂದ ಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಶೀರ್ವದಿಸಿ, ಮಾನವ ಜನ್ಮವನ್ನು ಮಾಧವ ಜನ್ಮವನ್ನಾಗಿಸಲು ಹಲವಾರು ಮಾರ್ಗಗಳು ಪುರಾಣದಲ್ಲಿ ಹೇಳಲ್ಪಟ್ಟಿದೆ. ಭಗವಂತನ ಲೀಲಾ ವಿನೋದಗಳನ್ನು ಕಥೆಗಳ ರೂಪದಲ್ಲಿ ನೀತಿ, ಸಂದೇಶಗಳನ್ನು ಸಾರುವ ಉದ್ಧೇಶ ಯಕ್ಷಗಾನ ಪ್ರಸಂಗಗಳದ್ದಾಗಿದೆ. ಯಕ್ಷಗಾನ ಪದ್ಯ ಪ್ರಧಾನ. ‘ಯಕ್ಷತೆ ಪೂಜ್ಯತೆ ಇತಿ ಯಕ್ಷಃ’ ಎಂದು ಹೇಳಲ್ಪಟ್ಟಿದೆ. ಯಕ್ಷಗಾನದಲ್ಲಿ ಭಾಗವತಿಕೆಗೂ ಅತ್ಯಂತ ಮಹತ್ವದ ಪಾತ್ರದ ವಹಿಸುತ್ತದೆ. ಮನೋರಂಜನೆ, ಸಂಪ್ರದಾಯ ರಕ್ಷಣೆ, ಇಷ್ಟಸಿದ್ಧಿಯನ್ನು ಯಕ್ಷಗಾನದಲ್ಲಿ ಕಾಣಬಹುದು. ದೃಶ್ಯಕಾವ್ಯದ ಕಾರಣಕ್ಕೆ ಯಕ್ಷಗಾನ ಜನಮಾನಸದಲ್ಲಿ ಹೆಚ್ಚು ಒಗ್ಗೂಡಿದೆ. ಯಕ್ಷಗಾನವು ರಾಮಾಯಣ, ಮಹಾಭಾರತದ ಸಮಗ್ರ ಅಂಶಗಳನ್ನು ಒಳಗೊಂಡಿದೆ. ಸಂಪ್ರದಾಯ ರಕ್ಷಣೆಯಲ್ಲಿ ಯಕ್ಷಗಾನದ್ದು ಪ್ರಮುಖ ಪಾತ್ರ. ಸಮಾಜದಲ್ಲಿ ನೈತಿಕತೆ ಹೆಚ್ಚಿಸುವಲ್ಲಿ ದೃಶ್ಯ ಮಾಧ್ಯಮ ಪರಿಣಾಮಕಾರಿಯಾಗಬೇಕು. ಯಕ್ಷಗಾನ ಸಂಸ್ಕಾರ ಸುಗಂಧ ಹೊರಸೂಸುತ್ತದೆ. ಹಾಗಾಗಿ ಯಕ್ಷಗಾನ ನೋಡುಗರ ಸಂಖ್ಯೆ ಹೆಚ್ಚಬೇಕು. ಆ ಮೂಲಕ ಸಮಾಜ ಸಂಸ್ಕಾರಯುತವಾಗಿ ಹೊರಹೊಮ್ಮಬೇಕು ಎಂದು ನೀಡಿದರು. ಸತ್ಕಾಮನೆಯನ್ನು ಈಡೇರಿಸುವ ಶಕ್ತಿ ಯಕ್ಷಗಾನಕ್ಕಿದೆ ಎಂದರು.
ಯಕ್ಷಗಾನದ ಆಖ್ಯಾನಗಳು ಜೀವನದ ಪಾಠ ಕಲಿಸುತ್ತದೆ. ಭಗವಂತನ ಸ್ಮರಣೆಯನ್ನು ಹೆಚ್ಚು ಮಾಡುವ ಮೂಲಕ ಮೋಕ್ಷ ಹೊಂದಬೇಕು ಎಂದೂ ಸಹ ಯಕ್ಷಗಾನ ತೋರಿಸುತ್ತದೆ. ಜನರು ಕೇವಲ ಮಾತಿಗೆ ಸೀಮಿತವಾಗದೇ, ಯಕ್ಷಗಾನವನ್ನು ಹೆಚ್ಚು ಬೆಳೆಸಬೇಕು ಎಂದು ಅವರು ನುಡಿದರು.
ದಿ. ಹೊಸ್ತೋಟ ಮಂಜುನಾಥ ಭಾಗವತ್ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಯಕ್ಷಗಾನ ಕಲಾವಿದ ಕೆ. ಜಿ.ಮಂಜುನಾಥ ಕೆಳಮನೆ ಮಾತನಾಡಿ, ಹೊಸ್ತೋಟ ಭಾಗವತರ ಒಡನಾಟ ಯಕ್ಷಗಾನದಲ್ಲಿ ಕುಟುಂಬದ ಸಾಧನೆಗೆ ಪ್ರಮುಖ ಕಾರಣ. ಮಾಡಿರುವ ಪಾತ್ರದಲ್ಲಿ ತೃಪ್ತಿ ಇರಬಾರದು, ಅತೃಪ್ತಿ ಇದ್ದರಷ್ಟೇ ಕಲಾವಿದನ ಬೆಳವಣಿಗೆ ಸಾಧ್ಯ. ಮಾಧ್ಯಮ ಎನ್ನುವುದು ನಮ್ಮೊಳಗಿನ ಆಂತರ್ಯವನ್ನು ವ್ಯಕ್ತಿಪಡಿಸಲು ಇರುವ ಅವಕಾಶ. ಹೊಸ್ತೋಟದವರಂತೆ ತಪಸ್ಸಿನಂತೆ ಯಕ್ಷಗಾನವನ್ನು ನಾನು ಪೂರ್ಣವಾಗಿ ಸ್ವೀಕರಿಸಲು ಸಾಧ್ಯವಾಗಿಲ್ಲ. ಅವರು ಸಾಧಕರು. ನನ್ನ ಕೈಲಾದ ಸೇವೆಯನ್ನು ಯಕ್ಷರಂಗಕ್ಕೆ ಸಲ್ಲಿಸುವೆ ಎಂದರು.
ಮುಖ್ಯ ಅತಿಥಿಗಳಾಗಿ ಅನಂತಮೂರ್ತಿ ಹೆಗಡೆ ಮಾತನಾಡಿ ಯಕ್ಷಗಾನವು ಪರಮಾತ್ಮನ ಸೇವೆ ಎನಿಸಿದೆ. ನಮಗೆ ರಾಮಾಯಣ, ಮಹಾಭಾರತ, ಭಾಗವತದಂತಹ ಪೌರಾಣಿಕಗಳ ಕುರಿತಾಗಿ ಜ್ಞಾನ ನೀಡುವಲ್ಲಿ ಯಕ್ಷಗಾನ ಹೆಚ್ಚು ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಸಂಸ್ಕೃತಿಗಳ ಪರಿಚಯ ನಮ್ಮ ಮಕ್ಕಳಿಗೆ ಆಗಬೇಕು ಎಂದರು.
ಧಾರವಾಡ ಹಾಲು ಒಕ್ಕೂಟ ಉಪಾಧ್ಯಕ್ಷ ಸುರೇಶ್ಚಂದ್ರ ಕೆಶಿನ್ಮನೆ ಮಾತನಾಡಿ, ಋಷಿ ಪರಂಪರೆಯಿಂದ ಬಂದವರು ನಾವು. ಶತಮಾನಗಳ ಕಾಲ ಆಕ್ರಮಣಕ್ಕೆ ಒಳಗಾದರೂ ಸಹ ನಮ್ಮ ಸಂಸ್ಕೃತಿ-ಸಂಪ್ರದಾಯವನ್ನು ಉಳಿಸಿದ ಗರಿಮೆ ಗುರು ಪರಂಪರೆಗೆ ಸಲ್ಲಬೇಕು. ಯಕ್ಷಗಾನ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಹಿರಿದಾಗಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದರು.
ಪ್ರವೀಣ ಮಣ್ಮನೆ ಮತ್ತು ಶ್ರೀನಿವಾಸ ಭಾಗವತ ನಿರ್ವಹಿಸಿದರು. ಯಕ್ಷ ಶಾಲ್ಮಲಾದ ಕಾರ್ಯಾಧ್ಯಕ್ಷ ಆರ್. ಎಸ್. ಹೆಗಡೆ ಭೈರುಂಬೆ ಸ್ವಾಗತಿಸಿದರು. ಯಕ್ಷಶಾಲ್ಮಲಾದ ಕಾರ್ಯದರ್ಶಿ ನಾಗರಾಜ ಜೋಶಿ ವಂದಿಸಿದರು.
ಮಕ್ಕಳ ತಾಳಮದ್ದಲೆ ಸ್ಪರ್ಧಾ ವಿಜೇತರ ಯಾದಿ:
ಹಿರಿಯರ ವಿಭಾಗದಲ್ಲಿ ಭೈರುಂಬೆ ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ, ಹೆಗಡೆಕಟ್ಟಾ ಪ್ರೌಢಶಾಲೆ ದ್ವಿತೀಯ ಹಾಗು ನಂದೊಳ್ಳಿ ಪ್ರೌಢಶಾಲೆ ಮೂರನೇ ಸ್ಥಾನ ಪಡೆದುಕೊಂಡಿತು.
ಕಿರಿಯರ ವಿಭಾಗದಲ್ಲಿ ಕೊಡಸೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಶಿರಸಿ ದ್ವಿತೀಯ ಸ್ಥಾನ, ಯಲ್ಲಾಪುರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಪಡೆದುಕೊಂಡರು.
ಸಾಂಸ್ಥಿಕ ವಿಭಾಗದಲ್ಲಿ ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ್ ಪ್ರಥಮ ಸ್ಥಾನ, ಯಕ್ಷಗೆಜ್ಜೆ ಶಿರಸಿ ದ್ವಿತೀಯ ಸ್ಥಾನ, ಸಪ್ತಸ್ವರ ಸೇವಾ ಸಂಸ್ಥೆ ಗುಂದಾ ತೃತೀಯ ಸ್ಥಾನ ಪಡೆದುಕೊಂಡಿತು.
ಯಕ್ಷಗಾನ ಶಾಸ್ತ್ರೀಯ ಕಲೆ ಎನ್ನುವುದರಲ್ಲಿ ಸಂಶಯವಿಲ್ಲ. ಮುಂದಿನ ದಿನದಲ್ಲಿ ಸರಕಾರವನ್ನು ಆಗ್ರಹಿಸುವ ಕೆಲಸ ಜನಪ್ರತಿನಿಧಿಗಳು ಕಲಾವಿದರುಗಳಿಂದ ಆಗಬೇಕಿದೆ – ಸ್ವರ್ಣವಲ್ಲೀ ಶ್ರೀ
ಯಕ್ಷಗಾನವನ್ನು ಸರಕಾರ ಶಾಸ್ತ್ರೀಯ ಕಲೆಯೆಂದು ಘೋಷಣೆ ಮಾಡಬೇಕು. ಆ ಮೂಲಕ ಯಕ್ಷಗಾನ ಕಲೆಯನ್ನು ಸರಕಾರ ಗೌರವಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು. – ಅನಂತಮೂರ್ತಿ ಹೆಗಡೆ, ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ