ಶಿರಸಿ: ಯಕ್ಷಗಾನದಂಥ ಕಲೆಗಳು ನಮ್ಮ ನಂಬಿಕೆಯನ್ಮು ಬಲಗೊಳಿಸುತ್ತದೆ. ದೇವರ ನಂಬಿಕೆ ಕೊರೋನಾದಂತಹ ಭಯದಲ್ಲೂ ಉಳಿಸಿಕೊಟ್ಟ ಉದಾಹರಣೆ ಇದೆ. ನಂಬಿಕೆಗಳು ಬದುಕನ್ನು ಬಲಗೊಳಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು.
ಶನಿವಾರ ಸ್ವರ್ಣವಲ್ಲೀ ಮಠದಲ್ಲಿ ಎರಡು ದಿನಗಳ ತಾಳಮದ್ದಲೆ ಸ್ಪರ್ಧೆಗೆ ಹಾಗೂ ಯಕ್ಷೋತ್ಸವಕ್ಕೆ ಚಾಲನೆ ನೀಡಿ, ದಿ.ಎಂ.ಎ.ಹೆಗಡೆ ದಂಟ್ಕಲ್ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು.
ಮನುಷ್ಯನ ಬದುಕಿಗೆ ಆಧಾರವಾದ ನಂಬಿಕೆಯನ್ನು ಬಲಗೊಳಿಸುವಲ್ಲಿ ಯಕ್ಷಗಾನ ಸದಾ ಕೆಲಸ ಮಾಡುತ್ತಿರುತ್ತದೆ.
ಭಕ್ತಿ ಎಂಬುದು ನಂಬಿಕೆ. ಕೆಲವು ಕಡೆ ತಂದೆ ತಾಯಿಗಳಿಗೆ ದೇವರಿಗಿಂತ ದೊಡ್ಡ ಸ್ಥಾನವಿದೆ ಎಂದೂ ಹೇಳಿದ ಶ್ರೀಗಳು, ಮಕ್ಕಳಲ್ಲಿ, ಸಮಾಜದಲ್ಲಿ ಆದರ್ಶಗಳನ್ನು ಬಿಂಬಿಸಬೇಕು. ಅಂತ ಕಾರ್ಯ ಯಕ್ಷಗಾನಗಳು ಮಾಡುತ್ತಿವೆ ಎಂದೂ ವಿಶ್ಲೇಷಿಸಿದರು.
ಯಕ್ಷಗಾನ ಕುಣಿಯುವುದಲ್ಲ: ಪ್ರಶಸ್ತಿ ಪುರಸ್ಕೃತ ಡಾ. ಜಿ.ಎಲ್.ಹೆಗಡೆ ಕುಮಟಾ, ಯಕ್ಷಗಾನ ಮೂಲತಃ ಹವ್ಯಕರದ್ದು. ಗಣಪತಿಯ ಗಾನ. ಯಕ್ಷ ಎಂದರೆ ಗಣಪತಿ ಎಂದೇ ಅರ್ಥ. ಯಕ್ಷಗಾನದ ಹಾಡುಗಳಿಗೆ ನಮ್ಮ ತಾಯಂದಿರು ಮೂಲ ಶಕ್ತಿ. ಬಲುದೊಡ್ಡ ಕೊಡುಗೆ ನೀಡಿದ ಹವ್ಯಕ ಸಮಾಜ ಎಂದರು.
ಯಕ್ಷಗಾನ ಎಂದರೆ ಕುಣಿಯುವುದಲ್ಲ. ಆರಾಧನಾ ಕಲೆ ಯಕ್ಷಗಾನ ಇಂದು ತಾಳಮದ್ದಲೆ ಕೂಡ ಉಳಿಸಿಕೊಳ್ಳಬೇಕು. ಮಹಾಭಾರತ, ರಾಮಾಯಣ ಅಧ್ಯಯನ ಮಾಡಿ ಜನರಿಗೆ ತಲುಪಿಸಬೇಕು. ಪ್ರಸಂಗ ಪಟ್ಟಿಯಲ್ಲಿ ಅವರಿಗೆ ಬೇಕಾದ ಪಾತ್ರ ಮಾತ್ರ ನೋಡುತ್ತಾರೆ ಎಂದೂ ವಿಷಾದಿಸಿದರು.
ಯಕ್ಷಗಾನ ಅಕಾಡೆಮಿ ಭದ್ರಗೊಳಿಸಿದರೆ ಅನೇಕ ಯಕ್ಷಗಾನದ ಕಾರ್ಯ ಮಾಡಬಹುದು ಎಂದೂ ಹೇಳಿದರು.
ವಿಶ್ವದರ್ಶನ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೊಣೆಮನೆ, ಯಕ್ಷಗಾನ ಕನ್ನಡ ಭಾಷೆಯ ಉಳಿವಿಗೆ ಕೆಲಸ ಮಾಡುತ್ತದೆ. ಯಕ್ಷಗಾನಕ್ಕೆ ಬೇಕಾದ ಸರಕಾರೇತರ ನೆರವಿನ ಕಾರ್ಯ ಆರಂಭಿಸುವ ಅಗತ್ಯತೆ ಇದೆ. ಕಲಾವಿದರು, ಕಲಾಸಕ್ತರು ಇದ್ದರೂ ಅದಕ್ಕೆ ಬೇಕಾದ ಬೆಂಬಲ ಕೊಡಬೇಕು. ಯಕ್ಷಗಾನ ಅಕಾಡೆಮಿಗೆ ಸೇರಿದರು ಸರಕಾರ ಕೂಡ ಬೆಂಬಲಿಸಬೇಕು. ಈ ಬಗ್ಗೆ ಲಾಬಿ ಮಾಡಬೇಕು ಎಂದರು.
ಶ್ರೀಮಠದ ವಿದ್ಯಾರ್ಥಿಗಳು ಸುಬ್ರಾಯ ಕೆರೆಕೊಪ್ಪ, ಎನ್
ಎನ್.ಹೆಗಡೆ ಫಲ ಸಮರ್ಪಿಸಿದರು. ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ಪ್ರಾಸ್ತಾವಿಕ ಮಾತನಾಡಿದರು.
ಪ್ರವೀಣ ಮಣ್ಮನೆ ನಿರ್ವಹಿಸಿದರು. ವೇದಿಕೆಯಲ್ಲಿ ಮಠದ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು. ಪ್ರಮುಖರಾದ ನಾರಾಯಣ ಬಳ್ಳಿ, ಮಾಯಾ ಹೆಗಡೆ ಇತರರು ಇದ್ದರು.
ಯಕ್ಷಗಾನದ ಮಿತಿ ಮೀರುವದಲ್ಲ. ಯಕ್ಷಗಾನ ನೃತ್ಯಕ್ಕೆ ಇರುವ ಮಿತಿಯಂತೆ ಮಾತಿಗೂ ಮಿತಿ ಇದೆ. ಮಿತಿ ಆಚೆ ಹೋದರೆ ಆಭಾಸ ಆಗುತ್ತದೆ. ಅತಿ ಎಲ್ಲೂ ಸಹಿಸಲಾಗದು. ಯಕ್ಷಗಾನದಲ್ಲಿ ಮಿತಿ ಅಳವಡಿಸಿಕೊಂಡರೆ ನಂಬಿಕೆ ಬೆಳೆಸಲು ಸಾಧ್ಯವಾಗುತ್ತದೆ. – ಸ್ವರ್ಣವಲ್ಲೀ ಶ್ರೀ