ಶಿರಸಿ: ಕಲೆಯು ಸಂಸ್ಕೃತಿಗೆ ಪ್ರೇರಕ. ಸಂಸ್ಕೃತಿ ಉಳಿಸುವಂತೆ ಕಲೆ ಇರಬೇಕು ಎಂದು ಪ್ರಸಿದ್ಧ ಯಕ್ಷಗಾನ ಭಾಗವತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿ ಹೇಳಿದರು.
ಅವರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಲಯನ್ಸ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಕಲಾ ವೈವಿಧ್ಯತೆಗಳ ಸಮಾಗಮ ಸಾಂಸ್ಕೃತಿಕ ಸೌರಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಲೆಯ ಮೂಲಕ ವ್ಯಕ್ತಿಗಳಲ್ಲಿ ನೈತಿಕತೆ ಬಿತ್ತಬೇಕು. ಪೌರಾಣಿಕ ಆಖ್ಯಾನಗಳು ಈ ಕಾರ್ಯ ಮಾಡುತ್ತವೆ. ಯಕ್ಷಗಾನದಲ್ಲೇ ವ್ಯಕ್ತಿ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಕಥೆಗಳು ತಿಳಿಸುತ್ತವೆ ಎಂದ ಅವರು, ರಾಮಾಯಣದಲ್ಲಿ ತಂದೆಯನ್ನು ಹೇಗೆ ನೋಡಿಕೊಳ್ಳಬೇಕು ಎಂದು ರಾಮನನ್ನು ನೋಡಿ, ಲಕ್ಷ್ಮಣನನ್ನು ನೋಡಿ ಸಹೋದರು ಹೇಗಿರಬೇಕು ಎಂಬುದನ್ನೂ ತಿಳಿಯಬಹುದು. ಹೇಗಿರಬಾರದು ಎಂಬುದಕ್ಕೆ ರಾವಣ, ಕೀಚಕನ ಪಾತ್ರಗಳು ಉದಾಹರಣೆಗೆ ಸಿಗುತ್ತವೆ ಎಂದು ವಿವರಿಸಿದರು.
ಕಲೆಯಿಂದ ಸಂಸ್ಕೃತಿಗಳ ಉಳಿವು. ಕಲೆಯ ಉಳಿವು ಪ್ರದರ್ಶಗಳಿಂದ ಮಾತ್ರ. ಈ ಕಾರಣದಿಂದ ಕಲಾ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸರಕಾರ ಅನುದಾನ ನೀಡುವುದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಎಲ್ಲರೂ ಇಂಜನೀಯರಿಂಗ್, ಮೆಡಿಕಲ್ ಕಡೆ ಹೋಗುತ್ತಿದ್ದಾರೆ. ಪಾಲಕರು ಮಕ್ಕಳನ್ನು ಕಲೆಯ ಕಡೆಗೆ ಪ್ರೋತ್ಸಾಹ ನೀಡದೇ ಹೋದರೆ ಕಲೆಗೆ, ಆ ಮೂಲಕ ಸಂಸ್ಕೃತಿಗೆ ಕೂಡ ಅಪಾಯವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಭಾಕರ ಹೆಗಡೆ ಮಾತನಾಡಿ, ಕಲೆ, ಸಂಸ್ಕೃತಿಗಳ ಉಳಿವು ಎಲ್ಲರ ಜವಬ್ದಾರಿ ಎಂದರು.
ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ.ನಾಯ್ಕ, ನಾಡಿನ ಪರಂಪರೆ ಉಳಿಸಿ ಬೆಳಸಿಕೊಂಡು ಹೋಗಬೇಕು ಎಂಬ ಆಶಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪ್ರಾಚಾರ್ಯ ಶಶಾಂಕ ಹೆಗಡೆ, ಸಂಸ್ಕೃತಿಗಳ ಉಳಿವಿಗೆ ಒಟ್ಟಾಗಿ ಶ್ರಮಿಸಬೇಕು ಎಂದರು. ಪ್ರವೀಣ ಮಣ್ಮನೆ ನಿರ್ವಹಿಸಿದರು.
ರಾಯಚೂರಿನ ಮಹಾಲಕ್ಷ್ಮೀ ಹಾಗೂ ಸುಧಾಕರ ಬಳಗದಿಂದ ಸುಗಮ ಸಂಗೀತ, ವಿ.ಉಮಾಕಾಂತ ಭಟ್ಟ ಕೆರೇಕೈ, ಜಾನಕಿ ಹೆಗಡೆ ಅವರಿಂದ ಗಮಕ ವಾಚನ, ಗಾಯಕಿ ದೀಪಾ ಶಶಾಂಕ ಹೆಗಡೆ ಅವರಿಂದ ಹಿಂದುಸ್ತಾನಿ ಗಾಯನ, ರಾಜೇಶ್ವರಿ ಹೆಗಡೆ ತಂಡದಿಂದ ಜಾನಪದ ಗೀತೆ, ವಸುಮತಿ ಹೆಗಡೆ ತಂಡದಿಂದ ನೃತ್ಯ ರೂಪಕ, ವಿಘ್ನೇಶ್ವರ ಗೌಡ ತಂಡದಿಂದ ಡೊಳ್ಳು ಕುಣಿತ, ಗಣಪತಿ ಗೌಡ ತಂಡದಿಂದ ಭಜನಾ ಕೋಲಾಟ, ಸಚಿನ್ ಗೌಡ ತಂಡದಿಂದ ಕೋಲಾಟ, ಅನಿರುದ್ಧ ವರ್ಗಾಸರ ತಂಡದಿಂದ ಯಕ್ಷಗಾನ ನಡೆದವು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಗರಾಜ ಜೋಶಿ ನಿರ್ವಹಿಸಿದರು.