ಹೊನ್ನಾವರ : ಶ್ರೀ ಚನ್ನಕೇಶವ ಪ್ರೌಢಶಾಲೆ ಕರ್ಕಿ ಸಭಾಭವನದಲ್ಲಿ ನೂತನವಾಗಿ ಆರಂಭಗೊಂಡ ಪ್ರಯೋಗಾಲಯದ ದಾನಿಗಳಲ್ಲಿ ಒಬ್ಬರಾದ ರಾಮ ಹಾಸ್ಯಗಾರ ಇವರಿಂದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಸಮಾರಂಭ ನಡೆಯಿತು.
ಡಾ. ವಿಕ್ರಂ ಸಾರಾಭಾಯಿ ಸ್ಮರಣೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕುಮಾರಿ ಧನ್ಯ ನಾಯ್ಕ ಪ್ರಥಮ ಸ್ಥಾನವನ್ನು , ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ಕುಮಾರ್ ಸುಮಂತ ಹರಿಕಾಂತ ದ್ವಿತೀಯ ಸ್ಥಾನವನ್ನು ಮತ್ತು ಶಿಕ್ಷಣ ಇಲಾಖೆ ಏರ್ಪಡಿಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಕುಮಾರಿ ದೀಕ್ಷ ಆಚಾರಿ ಮತ್ತು ಕುಮಾರಿ ಸ್ನೇಹ ಮೆಸ್ತ ಇವರನ್ನು ಪಾರಿತೋಷಕ ನೀಡಿ ಗೌರವಿಸಲಾಯಿತು.
ಪ್ರಯೋಗಾಲಯದ ನಿರ್ಮಾಣಕ್ಕೆ ಒಂದು ಲಕ್ಷ ಧನಸಹಾಯ ಮಾಡಿದ ರಾಮ ಹಾಸ್ಯಗಾರರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು ವಿದ್ಯಾಮಂದಿರ, ದೇವಮಂದಿರ ಮತ್ತು ಗೋಶಾಲೆ ಅಭಿವೃದ್ಧಿಯಾದರೆ ಊರು ಅಭಿವೃದ್ಧಿಯಾಗುತ್ತದೆ. ಈ ಶಾಲೆಯ ವಿದ್ಯಾರ್ಥಿಗಳ ಪುಣ್ಯದ ಫಲವೇ ನೂತನವಾಗಿ ನಿರ್ಮಾಣಗೊಂಡ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯದ ಎಂದು ಅಭಿಪ್ರಾಯಪಟ್ಟರು. ವಿದ್ಯೆಯೊಂದಿಗೆ ವಿನಯ ಸಂಪಾದಿಸಿಕೊಳ್ಳುತ್ತಾ ಸಮಾಜದ ದೊಡ್ಡ ವ್ಯಕ್ತಿ ಆಗಿ ಎಂದು ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಂ.ಕೆ. ಭಟ್ಟ ಸೂರಿ ಇವರು ಉದಾತ್ತ ಧ್ಯೇಯದಿಂದ ಮಾಡಿದ ಸಂಕಲ್ಪ ಸಾಕಾರಗೊಳ್ಳುತ್ತದೆ ಎಂದರು. ಮುಖ್ಯ ಅಧ್ಯಾಪಕರಾದ ಎಲ್. ಎಮ್.ಹೆಗಡೆ ಅಭಿನಂದನಾ ನುಡಿಗೈದರು. ವೇದಿಕೆಯಲ್ಲಿ ವಿಜ್ಞಾನ ಶಿಕ್ಷಕರಾದ ಶ್ರೀಕಾಂತ ಹಿಟ್ನಳ್ಳಿ, ಕಾರ್ಯಕ್ರಮ ನಿರೂಪಕರಾದ ಶ್ರೀಮತಿ ಸೀಮಾ ಭಟ್ಟ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ಟ ಎಲ್ಲರನ್ನ ವಂದಿಸಿದರು.