ಯಲ್ಲಾಪುರ: ತಂಬಾಕು ಚಟ ಬಿಡುವ ಬಗ್ಗೆ ಚಟ ಹೊಂದಿದ ವ್ಯಕ್ತಿಯಲ್ಲೇ ಸ್ವಯಂ ಪ್ರೇರಣೆಯಿಂದ ಚಟವನ್ನು ತೊರೆಯುವ ಇಚ್ಚಾಶಕ್ತಿ ಹೊಂದಿದಲ್ಲಿ ಮಾತ್ರ ಚಟದಿಂದ ದೂರವಾಗಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಬುಧವಾರ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ತಾಲೂಕಾ ಆಡಳಿತ, ಪಪಂ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸ್ವಚ್ಚತಾ ಕಾರ್ಮಿಕರಿಗೆ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಂಬಾಕು ಉತ್ಪನ್ನಗಳ ಮೇಲೆ ನಮೂದಿಸಿದರೂ, ತಂಬಾಕು ಚಟಕ್ಕೆ ಅಂಟಿಕೊಳ್ಳುವುದು ವಿಚಿತ್ರವಾಗಿದೆ. ತಂಬಾಕು ಸೇವನೆ ತ್ಯಜಿಸುವ ಬಗ್ಗೆ ಚಟ ಹೊಂದಿದ ವ್ಯಕ್ತಿ ಒಮ್ಮೆಗೆ ಚಟದಿಂದ ಹೊರಬರುವ ದೃಢ ನಿರ್ಧಾರಕ್ಕೆ ಬರಬೇಕು. ಹಂತ ಹಂತವಾಗಿ ಬಿಡುತ್ತೇನೆಂದರೆ,ಅದು ಪುನಃ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ. ಈಬಗ್ಗೆ ಜನರಲ್ಲಿ ಸ್ವಯಂ ಅರಿವು ಬರಬೇಕು ಎಂದರು.
ಪಪಂ ಉಪಾಧ್ಯಕ್ಷ ಅಮಿತ ಅಂಗಡಿ,ಸದಸ್ಯರಾದ ಸತೀಶ ನಾಯ್ಕ,ಅಬ್ದುಲ್ ಅಲಿ,ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ,ತಹಶಿಲ್ದಾರ ಅಶೋಕ ಭಟ್ಟ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ನರೇಂದ್ರ ಪವಾರ, ಪಪಂ ಸಮುದಾಯ ಸಂಘಟಕಿ ಹೇಮಾವತಿ ಭಟ್ಟ ಭಾಗವಹಿಸಿದ್ದರು.