ಡಾ ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯ
ಶಿರಸಿ.
ಪ್ರತಿ ಕಚೇರಿ, ಬ್ಯಾಂಕು, ಚಿನ್ನಾಭರಣಮಳಿಗೆ, ವಿಮಾ ಕಛೇರಿ, ಹಣಕಾಸು ಸಂಸ್ಥೆಗಳು, ಬಟ್ಟೆಯ ಮಳಿಗೆ,ವಾಹನದ ಮಾರಾಟ ಮಳಿಗೆ , ಔಷಧ ಮಳಿಗೆಗಳು, ಆಸ್ಪತ್ರೆಗಳು,ಇನ್ನಿತರ ವಿವಿಧ ಮಾದರಿಯ ಪೀಠೋಪಕರಣಗಳ ಇಂತಹ ದೊಡ್ಡ ಮೊತ್ತದ ಹಣದ ವಹಿವಾಟು ನಡೆಯುವ ಸ್ಥಳಗಳಲ್ಲಿ ವಾತಾನುಕೂಲ ಹವಾನಿಯಂತ್ರಣ ವ್ಯವಸ್ಥೆ ಇರುವುದು ಈಗ ರೂಢಿಯಾಗಿದೆ. ಅಲ್ಲದೆ ದೊಡ್ಡ ಮಟ್ಟದ ನಗದು ಬರುವಂತಹ ಸರಕಾರಿ ಕಚೇರಿಗಳಾದ ಆದಾಯ ತೆರಿಗೆ,ED, CBI,CID,COD, ಸರಕು ಸೇವಾ ತೆರಿಗೆ ಕಚೇರಿಗಳಲ್ಲಿಯೂ ನಗದು ಎಣಿಕೆ ಯಂತ್ರ ಅವಶ್ಯವಾಗಿರುತ್ತದೆ. ಹವಾನಿಯಂತ್ರಣದ ವ್ಯವಸ್ಥೆ ಅವಶ್ಯಕತೆ ಇದೆಯೋ ಇಲ್ಲವೋ ಬೇರೆ ಮಾತು ಆದರೆ ಅದು ಗತ್ತಿನ ಸಂಗತಿಯಾಗಿದೆ. ಸಣ್ಣ ಪುಟ್ಟ ಶಹರಗಳಿಗೂ ಈ ಹವಾನಿಯಂತ್ರಣ ವ್ಯವಸ್ಥೆಯ ಗತ್ತಿನ ಕಾರಣ ತಲುಪಿದೆ.
ಇಂತಹ ಹಲವು ಕೆಲವು ಕೇಂದ್ರಗಳಲ್ಲಿ ನಗದು ವ್ಯಾಪಾರ ವಹಿವಾಟು ನಡೆಯುತ್ತದೆ. ದೊಡ್ಡ ಮೊತ್ತದ ಹಣ ಪಾವತಿಸಲು ನೋಟಿನ ಬಂಡಲ್ಗಳನ್ನೇ ನೀಡಬೇಕಾಗುತ್ತದೆ. ಗ್ರಾಹಕ ಪಾವತಿಸಿದ ನಂತರ ಆ ಕೇಂದ್ರದ ಸಿಬ್ಬಂದಿಗಳು ಅದರ ಎಣಿಕೆ ಮಾಡಲು ನಗದು ಎಣಿಕೆ ಯಂತ್ರದ ಉಪಯೋಗವನ್ನು ಮಾಡುತ್ತಾರೆ. ಒಂದು ಕಾಲದಲ್ಲಿ ನಗದು ಎಣಿಕೆ ಯಂತ್ರ ಬ್ಯಾಂಕುಗಳಲ್ಲಿ ಮಾತ್ರ ಇರುತ್ತಿತ್ತು. ಆದರೆ ಅದು ಈ ಎಲ್ಲಾ ಕಡೆಗಳಲ್ಲಿಯೂ ನಗದು ಎಣಿಕೆ ಯಂತ್ರ ಸರ್ವೇಸಾಮಾನ್ಯವಾಗಿದೆ. ಈ ನಗದು ಎಣಿಕೆ ಯಂತ್ರಗಳಲ್ಲಿ ನಗದನ್ನು ಎಣಿಕೆ ಮಾಡಲು ಪ್ರಾರಂಭಿಸಿದಾಗ ಆ ನಗದಿನ ಜೊತೆಗೆ ಇರುವಂತಹ ಧೂಳು ಸಣ್ಣ ಕ್ರಿಮಿ ಕೀಟಗಳು, ಶಿಲೀಂಧ್ರ , ರೋಗಕ್ಕೆ ಕಾರಣವಾಗುವ ಸೂಕ್ಷ್ಮಾಣು ಜೀವಿಗಳು ಯಂತ್ರದಿಂದ ಎಣಿಕೆ ಮಾಡುವ ಸಂದರ್ಭದಲ್ಲಿ ಅಲ್ಲಿನ ವಾತಾವರಣ ಜೊತೆಗೆ ಸೇರುತ್ತವೆ. ಈ ರೀತಿ ವಾತಾನುಕೂಲ ವ್ಯವಸ್ಥೆ ಇರುವಂತಹ ಸ್ಥಳಗಳಲ್ಲಿ ಹೀಗೆ ನೋಟು ಎಣಿಕೆ ಮಾಡುವಾಗ ಹಾರಾಡಿದ ಈ ಧೂಳು, ಕ್ರಿಮಿ ಕೀಟಗಳು, ಶಿಲೀಂದ್ರಗಳು ರೋಗತ್ಪತ್ತಿ ಮಾಡುವಂತಹ ಸೂಕ್ಷ್ಮಾಣು ಜೀವಿಗಳು ಈ ಸ್ಥಳದಲ್ಲಿ ಇರುವಂತಹ ಎಲ್ಲರ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಉಂಟುಮಾಡುತ್ತದೆ. ವಾತಾನುಕೂಲ ವ್ಯವಸ್ಥೆ ಇರುವುದರಿಂದ ಇಲ್ಲಿ ಯಾವುದೇ ರೀತಿ ಗಾಳಿಯ ಪರಿಚಲನೆ ಅಸಾಧ್ಯ. ಹೊರಗಿನಿಂದ ಶುದ್ಧ ಗಾಳಿ ಒಳಗೆ ಬರುವ ಸಾಧ್ಯತೆಯೇ ಇಲ್ಲ. ಒಳಗಿನ ಕಲುಷಿತ ಗಾಳಿ ಹೊರಗೆ ಹೋಗುವ ಸಾಧ್ಯತೆಯೂ ಕಡಿಮೆ. ಇದರಿಂದಾಗಿ ನೋಟಿನ ಎಣಿಕೆಯ ಮೂಲಕ ಬರುವಂತಹ ಧೂಳು,ಕ್ರಿಮಿ ಇತ್ಯಾದಿ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಹಾಗೂ ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ. ಅಸ್ತಮಾ, ದಮ್ಮು ,ಕ್ಷಯ ಮುಂತಾದ ರೋಗಗಳು ಆಗುವ ಸಾಧ್ಯತೆ ಹೆಚ್ಚು. ಮೂಗು, ಗಂಟಲು ಶ್ವಾಸಕೋಶ ಉಪ್ಪುಸ ಪ್ರಭಾವಿತವಾಗುವಂತಹ ರೋಗಗಳು ಹೆಚ್ಚಾಗುತ್ತವೆ.
ಕಾರಣ ನಗದು ಎಣಿಕೆ ಯಂತ್ರ ಇರುವಂತಹ ಎಲ್ಲ ಸ್ಥಳಗಳಲ್ಲಿ ಸರಕಾರ ಅದನ್ನು ಇಡಲು ಗಾಜಿನ ಗೂಡು ಕಡ್ಡಾಯ ಮಾಡಬೇಕಾದಂತಹ ಪರಿಸ್ಥಿತಿ ಎದುರಾಗಿದೆ.