ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರಾಗಿದ್ದ ವಿಶ್ವನಾಥ ಹುಲಸ್ವಾರ ಅವರಿಗೆ ವರ್ಗಾವಣೆಯಾಗಿದ್ದು, ಇದೀಗ ಅವರ ವರ್ಗಾವಣೆಯನ್ನು ರದ್ದುಗೊಳಿಸಿ, ಮತ್ತೆ ಅಂಬೇವಾಡಿಯ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರನ್ನಾಗಿ ಮುಂದುವರಿಸಲಾಗಿದೆ.
ಪ್ರಾಚಾರ್ಯರಾಗಿ ಮರಳಿ ನಿಯೋಜನಗೊಂಡ ವಿಶ್ವನಾಥ ಹುಲಸ್ವಾರ ಅವರು ಮಂಗಳವಾರ ಬೆಳಿಗ್ಗೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಬರುತ್ತಿದ್ದಂತೆಯೇ, ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲೆ ಕೂತಿದ್ದ ಪ್ರಾಚಾರ್ಯ ವಿಶ್ವನಾಥ ಹುಲಸ್ವಾರ್ ಕಾರಿನಿಂದ ಇಳಿಯಲು ಹಿಂದೇಟು ಹಾಕಿದ್ದರು.
ಈ ನಡುವೆ ವಿದ್ಯಾರ್ಥಿಗಳು, ನಿನ್ನೆ ಶಾಲೆಗೆ ಬಂದು ಪ್ರಾಚಾರ್ಯರು ನಮಗೆ, ನಮ್ಮ ಅಪ್ಪ, ಅಮ್ಮನಿಗೆ ಬೈದಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿ ನಮಗೆ ಈ ಪ್ರಾಚಾರ್ಯರು ಬೇಡವೇ ಬೇಡ ಎಂದು ಪ್ರತಿಭಟನೆಯನ್ನು ನಡೆಸಿದ್ದಾರೆ. ಪ್ರತಿಭಟನೆಗೆ ಸ್ಥಳೀಯ ಸಾರ್ವಜನಿಕರು ಬೆಂಬಲವನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪತ್ರಕರ್ತರಾದ ಬಿ.ಎನ್. ವಾಸರೆ ಹಾಗೂ ಇನ್ನಿತರ ಪತ್ರಕರ್ತರು ಮತ್ತು ನಗರಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸದಸ್ಯರುಗಳಾದ ಸರಸ್ವತಿ ರಜಪೂತ್, ಸಂಜಯ್ ನಂದ್ಯಾಳ್ಕರ್, ಯಾಸ್ಮಿನ್ ಕಿತ್ತೂರ್, ಶಾಹಿದಾ ಪಠಾಣ್, ರುಹಿನಾ ಖತೀಬ್, ವೆಂಕಟರಮಣಮ್ಮ ಮೈಥುಕುರಿ ಅವರು ಪ್ರಾಚಾರ್ಯರು ಮಕ್ಕಳಿಗೆ ಬೈದಿರೋದು ತಪ್ಪು ಇದು ಒಳ್ಳೆಯ ಬೆಳವಣಿಗೆಯಲ್ಲ. ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಿಪಿಐ ಭೀಮಣ್ಣ.ಎಂ.ಸೂರಿ ಏರು ಧ್ವನಿಯಲ್ಲಿ ಮಾತನಾಡಿದ್ದು, ಆಗ ಸಿಪಿಐ ಭೀಮಣ್ಣ.ಎಂ.ಸೂರಿ, ಬಿ.ಎನ್.ವಾಸರೆ ಮತ್ತು ಸಂಜಯ ನಂದ್ಯಾಳ್ಕರ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಸಿಪಿಐ ಭೀಮಣ್ಣ.ಎಂ. ಸೂರಿ ಹಾಗೂ ಪಿಎಸ್ಐಗಳಾದ ಐ.ಆರ್.ಗಡ್ಡೇಕರ್ ಮತ್ತು ಯಲ್ಲಪ್ಪ.ಎಸ್ ಅವರು ಪ್ರಾಚಾರ್ಯ ವಿಶ್ವನಾಥ ಹುಲಸ್ವಾರ್ ಅವರನ್ನು ಕಾಲೇಜಿನ ಗೇಟ್ ಹೊರಗಡೆ ಕಳುಹಿಸುವಲ್ಲಿ ಯಶಸ್ವಿಯಾದರು.
ಪ್ರತಿಭಟನೆಯ ಕಾವು ಏರುತ್ತಿದ್ದಂತೆಯೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶೈಲೇಶ್ ಪರಮಾನಂದ, ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ್ ಪತ್ರಕರ್ತರ ಜೊತೆ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಬಿ.ಎನ್.ವಾಸರೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಈ ಹಿಂದೆ ವಿದ್ಯಾರ್ಥಿಗಳಿಗಾಗುತ್ತಿದ್ದ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ನಾವು ವಿದ್ಯಾರ್ಥಿಗಳ ಬಗ್ಗೆ ಅಪಾರವಾದ ಗೌರವ ಹಾಗೂ ಮಾನವೀಯ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯವನ್ನು ಕೊಡಿಸುವ ನಿಟ್ಟಿನಲ್ಲಿ ಬಂದಿದ್ದೇವೆಯೇ ಹೊರತು ಯಾವುದೇ ಸ್ವಹಿತಾಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ನಗರಸಭೆಯ ಸದಸ್ಯರಾದ ಸಂಜಯ ನಂದ್ಯಾಳ್ಕರ್ ಅವರು ಏಕಾಏಕಿ ನೀವು ಏರು ಧ್ವನಿಯಲ್ಲಿ ಮಾತನಾಡಿದ್ದು ತಪ್ಪು ಎಂದು ಸಿಪಿಐ ಭೀಮಣ್ಣ ಎಂ. ಸೂರಿ ಅವರಿಗೆ ಹೇಳಿದರು. ಆಗ ಸಿಪಿಐ ಭೀಮಣ್ಣ ಎಂ.ಸೂರಿಯವರು ನಾವು ಕಾನೂನನ್ನು ರಕ್ಷಣೆ ಮಾಡಲೇಬೇಕಾಗಿದೆ. ಹಾಗಾಗಿ ಅನಿವಾರ್ಯವಾಗಿ ಕೆಲವೊಮ್ಮೆ ಸಂದರ್ಭಕ್ಕನುಗುಣವಾಗಿ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರಲ್ಲಿ ಪತ್ರಕರ್ತ ಸಂದೇಶ್ ಎಸ್.ಜೈನ್ ಪ್ರಾಚಾರ್ಯರು ಮತ್ತು ಸಿಬ್ಬಂದಿಗಳ ನಡುವೆ ಮನಸ್ತಾಪವಿರುವ ಹಿನ್ನೆಲೆಯಲ್ಲಿ ಈ ಎಲ್ಲ ಘಟನೆಗಳು ನಡೆಯಲು ಕಾರಣವಾಗಿದೆ. ಹಾಗಾಗಿ ಪ್ರಾಚಾರ್ಯರಿಂದ ಹಿಡಿದು ಎಲ್ಲಾ ಸಿಬ್ಬಂದಿಗಳನ್ನು ಕೂಡಲೇ ವರ್ಗಾವಣೆಗೊಳಿಸಲು ಮೇಲಾಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆಯನ್ನು ನೀಡಬೇಕೆಂದು ಹಾಗೂ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರು ಹಾಗೂ ಎಲ್ಲ ಸಿಬ್ಬಂದಿಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ವರ್ಗಾವಣೆಗೊಳಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಾಚಾರ್ಯ ವಿಶ್ವನಾಥ ಹುಲಸ್ವಾರ್ ಅವರು ಹೆದರಿ ಕಾರಿನಿಂದ ಇಳಿದಿರಲಿಲ್ಲ. ನಾನು ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ನನ್ನ ಕಾರಿಗೂ ಡ್ಯಾಮೇಜ್ ಮಾಡಿದ್ದಾರೆ ಎಂದು ಆರೋಪವನ್ನು ವ್ಯಕ್ತಪಡಿಸುತ್ತಾರೆ.
ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆ ಮತ್ತು ಪತ್ರಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿಗೆ ಅಬ್ದುಲ್ ಕಲಾಂ ವಸತಿ ಶಾಲೆ ವೇದಿಕೆಯಾಯಿತು. ಸಿಪಿಐ ಭೀಮಣ್ಣ ಎಂ ಸೂರಿ ಅವರು ಅಬ್ದುಲ್ ಕಲಾಂ ವಸತಿ ಶಾಲೆಗೆ ಬಂದ ತಕ್ಷಣವೇ ಕಾರಿನಲ್ಲಿದ್ದ ಪ್ರಾಚಾರ್ಯ ವಿಶ್ವನಾಥ ಹುಲಸ್ವಾರ್ ಅವರನ್ನು ಕಾರಿನಲ್ಲಿ ಕುಳ್ಳಿರಿಸಿ ಮಾತನಾಡಿಸಿ, ಘಟನೆಗೆ ಕ್ಷಮೆಯನ್ನು ಪ್ರತಿಭಟನಾಕಾರರ ಮುಂದೆ ಕೋರುವಂತೆ ಹೇಳಿದ್ದಿದ್ದಲ್ಲಿ, ಪ್ರಾಚಾರ್ಯ ವಿಶ್ವನಾಥ ಹುಲಸ್ವಾರ್ ಅವರು ಅದನ್ನು ಪಾಲಿಸುತ್ತಿದ್ದಲ್ಲಿ, ಇಷ್ಟೆಲ್ಲ ರಾದ್ದಾಂತ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂಬ ಮಾತು ಚರ್ಚೆಯಲ್ಲಿದೆ.
ಒಟ್ಟಿನಲ್ಲಿ ಅಬ್ದುಲ್ ಕಲಾಂ ವಸತಿ ಶಾಲೆಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಶಾಲೆಯ ಪ್ರಾಚಾರ್ಯರಿಂದ ಹಿಡಿದು ಎಲ್ಲ ಸಿಬ್ಬಂದಿಗಳನ್ನು ತಕ್ಷಣ ವರ್ಗಾವಣೆ ಮಾಡದೇ ಇದ್ದಲ್ಲಿ, ಈ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ತೀವ್ರ ಪರಿಣಾಮ ಬೀಳಲಿದೆ.