ಸಂಸ್ಕೃತಿ ಇಲ್ಲದವರ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ | ಶಾಸಕ ಹೆಬ್ಬಾರ್ ತಿರುಗೇಟು
ಶಿರಸಿ: ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು, ಬಿಜೆಪಿ ಸರಕಾರದಲ್ಲಿಯೇ ಎಲ್ಲ ಅಧಿಕಾರವನ್ನು ಅನುಭವಿಸಿ ಇದೀಗ ನಮ್ಮ ಪಕ್ಷದ ವಿರುದ್ಧವೇ ಮಾತನಾಡುತ್ತಿರುವ ಶಾಸಕ ಶಿವರಾಮ್ ಹೆಬ್ಬಾರರಿಗೆ ಮಾನ-ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ತೊಲಗಲಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಕಿಡಿಕಾರಿದ್ದಾರೆ.
ಶಿರಸಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ಭಾರತೀಯ ಜನತಾ ಪಕ್ಷದಲ್ಲಿ ಇದ್ದುಕೊಂಡೇ ನಮ್ಮ ಪಕ್ಷದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದಂತಹ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧವೂ ಮಾತನಾಡುತ್ತಾರೆ. ಮಾತು ನೆತ್ತಿಗೇರಿದವರಂತೆ ಹೇಳುತ್ತಿದ್ದಾರೆ. ಯಾವ ಪಕ್ಷದಲ್ಲಿ ನಿಂತು ಹೇಳಿಕೆ ನೀಡುತ್ತಿದ್ದೇನೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಬಿಜೆಪಿಯಿಂದ ಗೆದ್ದು ಸಚಿವರಾಗಿ, ಶಾಸಕರಾಗಿರುವ ಅವರಿಗೆ ಆ ಪಕ್ಷದ ಬಗ್ಗೆ ಗೌರವ ಇರಬೇಕಿತ್ತು. ಅವರು ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷದಲ್ಲಿ ನಿಂತು ಹೀಗೆ ಮಾತನಾಡಲಿ ಬೇಸರವಿಲ್ಲ ಎಂದರು.
ಕ್ಷೇತ್ರದಲ್ಲಿ ಶಾಸಕ ಎಂದ ಕೂಡಲೇ ಕಾರ್ಯಕರ್ತರನ್ನು ಅಡವು ಇಟ್ಟುಕೊಳ್ಳಲು ಆಗುವುದಿಲ್ಲ. ಸಂಘಟನೆ ಗಟ್ಟಿ ಇದ್ದು ಪಕ್ಷವನ್ನು ಇನ್ನಷ್ಟು ಸದೃಢ ಮಾಡುತ್ತೇವೆ ಎಂದರು.
ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದು ನೇರಾನೇರ ಕಾಣುತ್ತದೆ. ಆದರೆ ಅವರು ಭಾಗಿಯಾಗಿದ್ದು ಹೆಬ್ಬಾರ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ. ಇದರಲ್ಲಿ ಬಿಜೆಪಿ ಮಾಜಿ ಸಚಿವರು, ಯಡಿಯೂರಪ್ಪ ಅವರ ಹೆಸರು ಇದೆ ಎನ್ನುವ ಹೆಬ್ಬಾರಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಆಗ ಶಿವರಾಮ ಹೆಬ್ಬಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಾಗ ನಾವೆಲ್ಲ ಶಾಸಕರಾಗಿದ್ದೆವು. ಆಗ ಯಡಿಯೂರಪ್ಪ ಅವರು ನೀವು ಬೇಜಾರಾಗಬಾರದು ನಾವು ಬರಮಾಡಿಕೊಂಡಿರುವ ಹೆಬ್ಬಾರ್‌ಗೆ ಸಚಿವ ಸ್ಥಾನ ನೀಡೋಣ ಎಂದು ಹೇಳಿದ್ದರು. ಅದಕ್ಕೆ ನಾವೆಲ್ಲರೂ ಸಮ್ಮತಿ ಸೂಚಿಸಿದ್ದೆವು. ಆದರೆ ಮಂತ್ರಿ ಮಾಡಿದ ಯಡಿಯೂರಪ್ಪ ವಿರುದ್ಧವೇ ಶಾಸಕ ಹೆಬ್ಬಾರ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಾಜಿ ಶಾಸಕರಾದ ಸುನೀಲ ನಾಯ್ಕ, ಸುನೀಲ್ ಹೆಗಡೆ, ವಿವೇಕಾನಂದ ವೈದ್ಯ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮುಂತಾದವರು ಇದ್ದರು.
ರೂಪಾಲಿಗೆ ಹೆಬ್ಬಾರ್ ತಿರುಗೇಟು
ಶಿರಸಿ: ಏನೂ ಕೆಲಸ ಇಲ್ಲದೇ ಇದ್ದವರು, ಮಾತಾಡುವ ಸಂಸ್ಕೃತಿ ಇಲ್ಲದವರು ಈ ರೀತಿ ಮಾತನಾಡುತ್ತಾರೆ. ಅವರ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರು ರೂಪಾಲಿ ನಾಯ್ಕ ಹೇಳಿಕೆಗೆ ಹೀಗೆಂದು ತಿರುಗೇಟು ನೀಡಿದರು.
ನಗರಕ್ಕೆ ಮಂಗಳವಾರ ಆಗಮಿಸಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಂಸ್ಕಾರ, ಸಂಸ್ಕೃತಿ ಇಲ್ಲದವರ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಡಿಯೂರಪ್ಪ ಅವರ ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಾನು ಎಂದೂ ಮಾತಾಡಿಯೇ ಇಲ್ಲ. ಅವರು ನನ್ನನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನು ಮಾಡಿದ್ದು ಸತ್ಯ, ಹಾಗೇ ನಾವು 17 ಮಂದಿ ಶಾಸಕರು ರಾಜೀನಾಮೆ ನೀಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಸತ್ಯ ಎಂದರು.