ಶಿರಸಿ: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಎನ್ನುವುದು ಕೇವಲ ಚುನಾವಣಾ ಸಂದರ್ಭದ ಘೋಷಣೆಯಾಗಿ ಉಳಿದಂತೆ ಕಂಡುಬರುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆಯಿದೆ. ಸರ್ಕಾರ ಈ ನಿಟ್ಟಿನಲ್ಲಿ ಆಸ್ಪತ್ರೆಯ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಈ ಹಿಂದೆ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು ಎಂದು ನಡೆಸಿದ ಪಾದಯಾತ್ರೆಯಲ್ಲಿ ಪಾಲ್ಗೊಂಡ ನನ್ನ ಸ್ನೇಹಿತ ಉಮೇಶ ಹರಿಕಂತ್ರ ಹೃದಯಾಘಾತದಿಂದ ಚಿಕಿತ್ಸೆ ಲಭ್ಯವಾಗದೇ ಸಾವನ್ನಪ್ಪಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿದ್ದರೆ ಅವರು ಬದುಕುತ್ತಿದ್ದರು. ಕಾರಣ ಆಡಳಿತ ನಡೆಸುತ್ತಿರುವ ಸರ್ಕಾರ ಇನ್ನಾದರೂ ಕಣ್ತೆರೆದು ಜನಪರ ಕಾಳಜಿಯಿಂದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ನಮ್ಮ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕೆಂದು ಶಿರಸಿ-ಕಾರವಾರ ಹಾಗೂ ಕುಮಟಾ-ಭಟ್ಕಳ ವರೆಗೆ ನಡೆಸಿದ 2 ಪಾದಯಾತ್ರೆಯಲ್ಲಿ ಉಮೇಶ ಹರಿಕಂತ್ರ ಪಾಲ್ಗೊಂಡಿದ್ದರು. ಈಗ ಅವರಿಗೆ ಹೃದಯಾಘಾತವಾಗಿ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಮ್ಮ ಜಿಲ್ಲೆಯಲ್ಲಿಯೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇದ್ದಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು. ತುರ್ತು ಮತ್ತು ಅಗತ್ಯ ಚಿಕಿತ್ಸೆ ಸಿಗದೇ ಹಲವಾರು ವ್ಯಕ್ತಿಗಳ ಪ್ರಾಣ ಹಾರಿಹೋಗಿದೆ. ಇದರಿಂದ ಸರ್ಕಾರ ಇಲ್ಲಿನ ಜನರ ಪ್ರಾಣ ಉಳಿಸಲು ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದರು.
ಚುನಾವಣೆಗೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ನಿರ್ಮಿಸುವ ಭರವಸೆ ನೀಡಿದ್ದರು. ಲೋಕಸಭಾ ಚುನಾವಣೆಯ ವೇಳೆಯಲ್ಲಿಯೂ ಆಸ್ಪತ್ರೆಯ ರಾಜಕೀಯ ಮಾಡಲಾಯಿತು. ಸಚಿವರು ಆಸ್ಪತ್ರೆ ಮಾಡಿಯೇ ಸಿದ್ದ ಎಂದು ಹೇಳಿಕೆ ನೀಡಿದ್ದರು. ಆದರೆ ಈ ವರೆಗೆ ಆಸ್ಪತ್ರೆ ಮಾಡಲಾಗಿಲ್ಲ. ಕುಮಟಾದಲ್ಲಿ ಆಸ್ಪತ್ರೆಗೆಂದು ಜಾಗ ಗುರುತಿಸಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟರೂ ಅದನ್ನೆಲ್ಲ ಹೊಸ ಸರಕಾರ ಬಂದ ನಂತರ ಆಸ್ಪತ್ರೆ ಮರೀಚಿಕೆಯಾಗಿಯೇ ಉಳಿಯಿತು. ಆಸ್ಪತ್ರೆ ನಿರ್ಮಾಣಕ್ಕೆ ಇನ್ನೆಷ್ಟು ಜನರ ಪ್ರಾಣ ಹೋಗಬೇಕು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶೋಭಾ ನಾಯ್ಕ, ಮಂಜು ಜೈನ್ ಕುಮಟಾ, ರವೀಂದ್ರ ನಾಯ್ಕ , ಶಿವಾನಂದ ದೇಶಳ್ಳಿ, ಕಮಲೇಶ ನಾಯ್ಕ, ಮಂಜುನಾಥ ಹರಿಕಂತ್ರ, ನವಾಜ್ ಸಯ್ಯದ್ ಮತ್ತಿತರರು ಇದ್ದರು.
ನಾವು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೋರಾಟ ಮಾಡಿ ಪಾದಯಾತ್ರೆ ಮಾಡಿದಾಗ ನಮ್ಮೊಂದಿಗಿದ್ದ ಉಮೇಶ ಹರಿಕಂತ್ರ ಎನ್ನುವ ಸ್ನೇಹಿತನ್ನು ಕಳೆದುಕೊಂಡಿದ್ದೇವೆ. ಅವರಿಗೆ ತುರ್ತು ಚಿಕಿತ್ಸೆ ತಕ್ಷಣ ಲಭಿಸಿದ್ದರೆ ಅವರು ಇಂದು ನಮ್ಮೊಂದಿಗೆ ಬದುಕಿರುತ್ತಿದ್ದರು. ಜನರಿಗೆ ತುರ್ತು ಚಿಕಿತ್ಸೆ ಸಿಗದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಉಸ್ತುವಾರಿ ಸಚಿವರು ಮನಗಂಡು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಬೇಕು.
ಅನಂತಮೂರ್ತಿ ಹೆಗಡೆ, ಸಾಮಾಜಿಕ ಹೋರಾಟಗಾರ