ಯಲ್ಲಾಪುರ: ರೈತರು ಒಂದೇ ಬೆಳೆಗೆ ಜೋತು ಬೀಳದೇ,
ಏಕಬೆಳೆಯ ಜೊತೆಗೆ ಇನ್ನಷ್ಟು ಪೂರಕ ಬೆಳೆಗಳನ್ನು ಬೆಳೆಯುವತ್ತ ಗಮನ ಹರಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಹೇಳಿದರು.
ಅವರು ತಾಲೂಕಿನ ಚಂದ್ಗುಳಿಯ ಜಂಬೆಸಾಲಿನಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯಡಿಯಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಗಮನ ನೀಡಬೇಕು. ಜಿಲ್ಲೆಯಲ್ಲಿ 33000ಹೆಕ್ಟೇರ್ ಪ್ರದೇಶ ಅಡಿಕೆ ಕ್ಷೇತ್ರ ಹೊಸದಾಗಿ ವಿಸ್ತರಣೆ ಆಗಿದ್ದು ಮುಂದಿನ ದಿನದಲ್ಲಿ ಅಗತ್ಯಕ್ಕಿಂತ ಅಡಿಕೆಬೆಳೆಯಾದಾಗ ಅದರ ದರದಲ್ಲಿ ನಮ್ಮ ವ್ಯವಹಾರದಲ್ಲಿ ಏರುಪೇರಾಗಬಹುದು. ಯುವ ಪೀಳಿಗೆಯಲ್ಲಿ ಕೃಷಿಯ ಬಗ್ಗೆ ಉತ್ತೇಜಿಸುವ ಪ್ರಯತ್ನ ನಡೆಯಬೇಕು ಎಂದರು.
ಕೃಷಿ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ಅಧ್ಯಯನವಿಲ್ಲದೇ ರಾಸಾಯನಿಕವೋ ಇನ್ನಾವುದೋ ಸಿಂಪರಣೆಗೆ ಮುಂದಾಗಬಾರದು. ಕೃಷಿ ಭಾಗ್ಯ ಯೋಜನೆಯ ಸದುಪಯೋಗ ಪಡೆದು ನೀರಾವರಿ ಮಾಡಿಕೊಳ್ಳಬೇಕು ಎಂದರು.
ಉಪಳೇಶ್ವರ ಸಿದ್ದಿವಿನಾಯಕ ಸಹಕಾರಿ ಸಂಘದ ಅಧ್ಯಕ್ಷ ಎಸ್.ಕೆ.ಭಾಗ್ವತ್ ಕಾರ್ಯಕ್ರಮ ಉಧ್ಘಾಟಿಸಿದರು. ಗ್ರಾ ಪಂ ಸದಸ್ಯ ಆರ್.ಎಸ್. ಭಟ್ಟ ನಂದೊಳ್ಳಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ನರಸಿಂಹ ಭಟ್ಟ, ಪಿಡಿಓ ರಾಜೇಶ ಶೇಟ್, ಪ್ರಮುಖರಾದ ಶ್ರೀರಂಗ ಕಟ್ಟಿ, ಗಣಪತಿ ಹೆಗಡೆ, ಶಾರದಾ ಭಾಗ್ವತ್, ಶ್ರೀಲತಾ ರಾಜೀವ ಹೆಗಡೆ ಎಂ.ಜಿ. ಭಟ್ಟ ಇಡಗುಂದಿ, ಪ್ರಕಾಶ ರೆಡ್ಡಿ ಭಾಗವಹಿಸಿದ್ದರು.