ದಾಂಡೇಲಿ : ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯ ಆಶ್ರಯದಡಿ ಹಳಿಯಾಳ, ದಾಂಡೇಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಗುರುವಾರ ನಗರದ ಸುಭಾಷನಗರದ ಒಳ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಸುರೇಶ ನಾಯಕ ಅವರು ಕ್ರೀಡೆ ಪರಸ್ಪರ ವ್ಯಕ್ತಿತ್ವ ಹಾಗೂ ಮಾನಸಿಕ ಸದೃಢತೆಗೆ ಪರಿಣಾಮಕಾರಿಯಾಗಿದೆ. ಈ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕಾಗಿ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಪ್ರಧಾನ ಕಾರ್ಯದರ್ಶಿ ಗುರು ಮಠಪತಿಯವರು ಅತ್ಯುತ್ತಮವಾದ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಕ್ರೀಡೆ ಸಹಕಾರಿ. ವಿದ್ಯಾರ್ಥಿಗಳು ಪಾಠದ ಜೊತೆ ಜೊತೆಗೆ ಆಟದ ಕಡೆಯೂ ಗಮನವನ್ನು ನೀಡಬೇಕು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆಯ ಸದಸ್ಯರಾದ ರೋಷನಜಿತ್, ಜನತಾ ವಿದ್ಯಾಲಯ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನವೀನ್ ಕಾಮತ್, ಪ್ರಮುಖರಾದ ಪ್ರಶಾಂತ್ ಬಸೂರ್ತೆಕರ, ಜೆವಿಡಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ರೀಟಾ ಡಯಾಸ್, ಜೆವಿಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ. ಅರವಳ್ಳಿ, ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಡೇವಿಡ್ ದಾನಂ, ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸೀತಾರಾಮ ನಾಯ್ಕ, ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಸಾಧಿಕ್ ಬೀಡಿ, ಯಾಕುಬ್ ಶೇಖ, ಎಚ್.ಎಸ್. ಉದ್ದಂಡಿ, ಪ್ರೇಮಾ ಸಿದ್ದಿ, ಪಿ.ಆರ್.ಬಣದೂರಕರ, ಸಮದ್ ಶೇಖ, ಶ್ವೇತಾ ನಾಯ್ಕ ಮತ್ತು ಅಶೋಕ ಮೊದಲಾದವರು ಉಪಸ್ಥಿತರಿದ್ದರು.
ಜನತಾ ವಿದ್ಯಾಲಯ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವೀಣಾ ಪ್ರಕಾಶ ಮೇಹ್ತಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಕವಿತಾ ನಕುಲ್ ಕಾಮತ್ ವಂದಿಸಿದರು. ಕಾರ್ಯಕ್ರಮದ ಯಶಸ್ಸಿಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.