Slide
Slide
Slide
previous arrow
next arrow

ಹಲವರ ಬದುಕಿಗೆ ದಾರಿದೀಪವಾಗಿದ್ದ ‘ವೆಂಕಟ್ರಮಣ ಮಾಸ್ತರ್’ ಅಸ್ತಂಗತ

300x250 AD

ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಮಾಸೂರಿನಲ್ಲಿ 15-03-1938ರಂದು ತೆಂಗಿನ ಗಿಡಗಳ ವ್ಯಾಪಾರಿ ಮಾಸ್ತಿ ಹೊನ್ನಪ್ಪ ನಾಯ್ಕ ಮತ್ತು ಮಹಾನ್ ಸಾಧ್ವಿ ನಾಗಮ್ಮ ನಾಯ್ಕರವರ ದ್ವಿತೀಯ ಪುತ್ರರಾಗಿ ಜನಿಸಿದ ನಿವೃತ್ತ ಶಿಕ್ಷಕರಾದ ಶ್ರೀ ವೆಂಕಟ್ರಮಣ ಮಾಸ್ತಿ ನಾಯ್ಕ (ವಿ. ಎಂ. ನಾಯ್ಕ)ರವರು ಆ.18ರಂದು ಬೆಳಿಗ್ಗೆ 4:43ಕ್ಕೆ ದೈವಾಧೀನರಾಗಿದ್ದಾರೆ.

ಮಾಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ರಸ್ತೆ ಸರಿಯಾಗಿ ಇಲ್ಲದಿರುವ ಅಂದು ನದಿಯ ಬದಿಯ ಹಾಳೆಕಟ್ಟೆ ಮೇಲೆ ನಡೆದು ಹೋಗಿ ಹೆಗಡೆಯ ಶಾಂತಿಕಾಬಾ ಪ್ರೌಢಶಾಲೆಯಲ್ಲಿ SSC (Secondary School Certificate) ಪ್ರೌಢ ಶಿಕ್ಷಣ ಪಡೆದರು. ನಂತರ ಅಂಕೋಲಾದಲ್ಲಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಶಿಕ್ಷಕರಾಗಿ ನೇಮಕರಾಗಿ ಶಿರಸಿಯ ಬೇಗದ್ದೆಯ ಪ್ರಾಥಮಿಕ ಶಾಲೆಯಲ್ಲಿ ಮೊದಲು ಮಕ್ಕಳಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದ ಇವರು ಶಿರಸಿಯ ಗ್ರಾಮೀಣ ಪ್ರದೇಶ, ಚಿಟ್ಟೆಕಂಬಿ, ದೀವಗಿ, ಮಾಸೂರು, ನವಿಲಗೋಣ, ಚಿಪ್ಪಿಹಕ್ಕಲ, ತಲಗೋಡು, ಬೆಲಕೊಂಡ-ಹೊನ್ನಾವರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 33ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಏನು ವ್ಯವಸ್ಥೆ ಇಲ್ಲದ ಕೇವಲ 4ನೇ ತರಗತಿವರೆಗೆ ಇದ್ದ ಹೊನ್ನಾವರ ತಾಲೂಕಿನ ತಲಗೋಡು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಊರಿನ ಗ್ರಾಮಸ್ಥರ ಮನವೊಲಿಸಿ, ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ, ಹೋರಾಟ ಮಾಡಿ, ಶಾಲಾ ಕೊಠಡಿಗಳನ್ನು ನಿರ್ಮಿಸಿ 5ರಿಂದ 7ನೇ ತರಗತಿವರೆಗೆ ತರಗತಿ ಪ್ರಾರಂಭಿಸಿ ಅಂದಿನ ಜಿಲ್ಲಾ ಉಪನಿರ್ದೇಶಕರಿಂದ ಜಿಲ್ಲಾ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಇವರದು.
ಸಾರಿಗೆ ಸಂಪರ್ಕ ಸರಿಯಾಗಿ ಇಲ್ಲದೆ ಇರುವ ಅಂದಿನ ದಿನಗಳಲ್ಲಿ ತಾವೇ ಕಾಲ್ನಡಿಗೆಯಿಂದ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೋಗಿ ಮಕ್ಕಳಿಗೆ ಅಗತ್ಯವಿರುವ ಪುಸ್ತಕ, ಆಹಾರ ಪೊಟ್ಟಣ, ಸಮವಸ್ತ್ರಗಳನ್ನು ತಾವೇ ಹೊತ್ತುಕೊಂಡು ಶಾಲೆಗೆ ತಂದು ಮಕ್ಕಳಿಗೆ ವಿತರಿಸುವ ಮಹಾನ್ ಸಂತ ಇವರು.
ಬಡತನದ ಬೇಗೆಯಿಂದ ಶಾಲೆ ಬಿಡುತ್ತಿರುವ ಮಕ್ಕಳ ಮನೆ ಮನೆಗೆ ತೆರಳಿ ಪಾಲಕರ ಮನವೊಲಿಸಿ, ಮನೆಯಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ಅವರಿಗೆ ವಿದ್ಯಾಭ್ಯಾಸ ಮಾಡಿಸಿ ಸಾವಿರಾರು ಮಕ್ಕಳಿಗೆ ಭವಿಷ್ಯ ರೂಪಿಸಿಕೊಟ್ಟ ಮಹಾನ್ ದಾರ್ಶನಿಕ ಇವರು.
ತಮ್ಮ ವೃತ್ತಿ ಜೀವನದಲ್ಲಿ ಎಳ್ಳಷ್ಟೂ ಕಪ್ಪು ಚುಕ್ಕೆ ಇಲ್ಲದೆ ಅನವಶ್ಯಕವಾಗಿ ರಜೆಗಳನ್ನು ತೆಗೆದುಕೊಳ್ಳದೆ ವರ್ಷದ ಎಲ್ಲ ಶಾಲಾ ದಿನಗಳಲ್ಲಿ ಸದಾ ಹಾಜರಾತಿ ಇರುವ ಪ್ರಾಮಾಣಿಕ ಶಿಕ್ಷಕರು.
ತಮ್ಮ ತಂದೆ ತಾಯಿಯವರ ಸೇವೆಗೋಸ್ಕರ ನವಿಲಗೋಣ ಶಾಲೆಯಿಂದ ತಮ್ಮ ಊರು ಮಾಸೂರಿಗೆ ಆಗಮಿಸಿ, ನಿಸ್ವಾರ್ಥವಾಗಿ ಶೃದ್ಧೆಯಿಂದ ತಂದೆ ತಾಯಿಯ ಸೇವೆ ಮಾಡಿ, ತಮ್ಮ ಕಿರಿಯ ಸಹೋದರ, ಸಹೋದರಿ ಮತ್ತು ಹಿರಿಯ ಸಹೋದರನ ಮಕ್ಕಳಿಗೆ ತಾವೇ ಪಾಲನೆ-ಪೋಷಣೆ ಮಾಡಿ ಅವರ ಭವಿಷ್ಯ ರೂಪಿಸಿದ ಮಹಾನ್ ಶಿಲ್ಪಿ ಹಾಗೂ ಮಾಸೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 12ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀ ರಾಮಚಂದ್ರನ ಪ್ರತಿರೂಪ ಇವರು.
ತಾವು ಸೇವೆ ಸಲ್ಲಿಸಿದ ಅನೇಕ ಶಾಲೆಗಳಲ್ಲಿ ಸನ್ಮಾನಿತರಾದ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ “ವೆಂಟ್ರ ಮಾಸ್ತರರು” ಇವರು.
ಮಾಸೂರಿನ “ವೆಂಟ್ರ ಮಾಸ್ತರರು” ಎಂದರೆ ಊರಿನ ನಾಗರಿಕರಿಗೆ ಗೋವಿಂನಂತ ಮಹಾನ್ ದೇವತಾ ಪುರುಷರು ಎಂದರೆ ಅತಿಶಯೋಕ್ತಿಯಾಗಲಾರದು.
ಸದಾ ಶಾಖಾಹಾರಿಯಾಗಿರುವ ಸಾತ್ವಿಕ ಮನೋಭಾವದ, ದೈವಿ ಭಕ್ತರಾಗಿದ್ದು ಸದಾ ಆಧ್ಯಾತ್ಮಿಕ ಚಿಂತನೆಯಲ್ಲೇ ತೊಡಗಿ, ಎಲ್ಲರಿಗೂ ಸದಾ ಮಾರ್ಗದರ್ಶನ ನೀಡುತ್ತಿರುವ ವೆಂಕಟ್ರಮಣ ಮಾಸ್ತರರ ಗರಡಿಯಲ್ಲಿ ಪಳಗಿದ ಸಹಸ್ರಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದಾರೆ.

ಪತ್ನಿ ಮತ್ತು ತಮ್ಮ ಹಿರಿಯ ಪುತ್ರನನ್ನು ಕಳೆದುಕೊಂಡ ಇವರು ಎಷ್ಟೋ ನೋವನ್ನು ಉಂಡರೂ ಕೂಡ ಮಹಾನ್ ಯೋಗಿಯಂತೆ ಬದುಕಿ ಎಲ್ಲರಿಗೂ ಮಾದರಿಯಾಗಿದ್ದರು. ತಮ್ಮ ದ್ವಿತೀಯ ಪುತ್ರ ರಮೇಶ, ಸೊಸೆ ಪೂರ್ಣಿಮಾ, ಹಿರಿಯ ಮಗಳು ಗೀತಾ, ಎರಡನೇ ಮಗಳು ಗಾಯತ್ರಿ ಮೊಮ್ಮಕ್ಕಳಾದ ಅಭಿಷೇಕ, ಪ್ರೀತಮ್, ಚರಿಷ್ಮಾ, ಚಿಂತನಾ, ರಶ್ಮಿ ಮತ್ತು ಹರ್ಷಿಕಾ, ಸಮಸ್ತ ಅಭಿಮನ್ಯು ಮನೆ ಕುಟುಂಬ ಮತ್ತು ಎಲ್ಲರ ಜೊತೆ ಸಂತಸವಾಗಿ ಬದುಕಿದ್ದ ಇವರು ವಯೋಸಹಜ ಖಾಯಿಲೆಯಿಂದ ನಮ್ಮನ್ನೆಲ್ಲ ಅಗಲಿರುವುದು ತುಂಬಲಾರದ ನಷ್ಟವಾಗಿದೆ. ಇವರ ಅಗಲಿಕೆಗೆ ಬಂಧು ಮಿತ್ರರು, ಇವರಿಂದ ಕಲಿತ ಅಪಾರ ವಿದ್ಯಾರ್ಥಿಗಳು, ಊರಿನ ನಾಗರಿಕರು ಕಂಬನಿ ಮಿಡಿದು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೊರಿದ್ದಾರೆ.

300x250 AD

Share This
300x250 AD
300x250 AD
300x250 AD
Back to top