ಶಿರಸಿ: ನಾನು ಗಮನಿಸಿದಂತೆ ಸೇವೆಗೆ ಅನ್ವರ್ಥವೇ ಶಿರಸಿ ರೋಟರಿ. ಹಿಂದೊಮ್ಮೆ ನಾನು ಪಾಲ್ಗೊಂಡಿದ್ದ ಬೆನ್ನುಹುರಿ ಚಿಕಿತ್ಸಾ ಶಿಬಿರ ಮತ್ತದರ ಫಲಾನುಭವಿಗಳ ಚಿತ್ರಣ ಈಗಲೂ ಕಣ್ಮುಂದಿದೆ. ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಿರುವ ಶಿರಸಿ ರೋಟರಿಯ ಸೇವಾಭಾವ ನಿಜಕ್ಕೂ ಆದರ್ಶಪ್ರಾಯ ಎಂದು ಆರಕ್ಷಕ ಉಪಾಧೀಕ್ಷಕರಾದ ಕೆ.ಎಲ್. ಗಣೇಶ ಹೇಳಿದ್ದಾರೆ.
ಆ.15ರ ಸಂಜೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿರಸಿ ರೋಟರಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಮೂವರು ಸೇವಾನಿವೃತ್ತ ಯೋಧರಿಗೆ ಸನ್ಮಾನ ನೆರವೇರಿಸಿ ಮಾತನಾಡುತ್ತ ಅದು ಜಾಗೃತಿ ಜಾಥಾದ ಸೈಕಲ್ ಅಥವಾ ಬೈಕ್ ರ‌್ಯಾಲಿಯಿರಲಿ, ವಾಕೆಥ್ರೊನ್ ಇರಲಿ ಅಥವಾ ಸರಕಾರಿ ಆಡಳಿತ ಸೂಚಿಸುವ ಯಾವುದೇ ಕಾರ್ಯವಿರಲಿ ಶಿರಸಿ ರೋಟರಿ ಸ್ವಯಂ ಪ್ರೇರಣೆಯಿಂದ ಶ್ರದ್ಧೆಯಿಂದ ನಿರ್ವಹಿಸುತ್ತದೆ ಎಂದರು.
ಸಂಮಾನ ಸ್ವೀಕರಿಸಿದ ಕರ್ನಲ್ ಮಂಜುನಾಥ ಹೆಗಡೆ, ಕ್ಯಾಪ್ಟನ್ ಸುಜಯ್ ಹೆಗಡೆ ಮತ್ತು ಕಮಾಂಡರ್ ನಿಖಿಲ್ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು.
ಮಾಜಿ ಸಹಾಯಕ ಪ್ರಾಂತಪಾಲ ವಿಷ್ಣು ಹೆಗಡೆ, ಶಿರಸಿ ರೋಟರಿಗೆ ಡಾ. ರೋಹಿತ್ ಹೆಗಡೆಯವರನ್ನು ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷೆ ಡಾ. ಸುಮನ್ ದಿನೇಶ್ ಸ್ವಾಗತಿಸಿ ನಾವೆಲ್ಲರೂ ರಾಷ್ಟ್ರಪ್ರೇಮ ಮೆರೆಯೋಣ ಎಂದರು.
ಮುಖ್ಯ ಅತಿಥಿಗಳನ್ನು ಪ್ರೀತಮ್ ಬಾರಕೂರು ಮತ್ತು ನೂತನ ಸದಸ್ಯರನ್ನು ಸೂಚಕ ಡಾ. ಶಿವರಾಮ ಪರಿಚಯಿಸಿದರೆ ಸಂಮಾನಿತ ಯೋಧರನ್ನು ಉಮಾಪತಿ ಹೆಗಡೆ, ಮಾಧುರಿ ಶಿವರಾಮ ಮತ್ತು ಡಾ. ಆರ್.ಜಿ. ಹೆಗಡೆ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿರ್ಣಾಯಕರಾಗಿದ್ದ ರೇಖಾ ಭಟ್ಟ ಮತ್ತು ಶಾರದಾ ಕಳಸಣ್ಣನವರ್ ಅನಿಸಿಕೆ ವ್ಯಕ್ತಪಡಿಸಿದರು. ರೋಟರಿ ಬಳಗದ ಪುಟಾಣಿಗಳಿಂದ ಚದ್ಮವೇಷ ಕಾರ್ಯಕ್ರಮ ನಡೆಯಿತು. ಸುನಯನಾ ಗಣಪತಿ, ರೇಖಾ ಭಟ್ ನಾಡ್ಗುಳಿ ಮತ್ತು ವಿಜಯಶ್ರೀ ರಮೇಶ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಸರಸ್ವತಿ ಎನ್. ರವಿ ವಂದಿಸಿದರು. ಲತಾ ಮತ್ತು ಗಣೇಶ ಹೆಗಡೆ ದಂಪತಿ ನಿರ್ವಹಿಸಿದರು. ಇನ್ನರ್ ವ್ಹೀಲ್ ಅಧ್ಯಕ್ಷೆ ರೇಖಾ ಅನಂತ ವೇದಿಕೆಯಲ್ಲಿದ್ದರು. ಅಂದು ಬೆಳಿಗ್ಗೆ ರೋಟರಿ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಧ್ವಜಾರೋಹಣದಲ್ಲಿ ಎಲ್ಲರೂ ಪಾಲ್ಗೊಂಡಿದ್ದರು.