ಯಲ್ಲಾಪುರ: ಸಣ್ಣಪುಟ್ಟ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದ್ದು ಅದಕ್ಕಾಗಿ ಸೆ.14ರಂದು ಲೋಕ್ ಅದಾಲತ್ ಹಮ್ಮಿಕೊಂಡಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ. ಹಳ್ಳಕಾಯಿ ಹೇಳಿದರು.
ಅವರು ನ್ಯಾಯಾಲಯದ ಆವರಣದಲ್ಲಿ ಸೋಮವಾರ ಸಂಜೆ ಈ ಕುರಿತು ನಡೆದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನ್ಯಾಯಾಲಯದ ಮೇಲೆ ಜನರ ವಿಶ್ವಾಸ ಹೆಚ್ಚಿಸುವುದು,ತ್ವರಿತ ನ್ಯಾಯದಾನ ಮಾಡುವುದು ಲೋಕ ಅದಾಲತ್ ಉದ್ದೇಶವಾಗಿದೆ. ಚೆಕ್ ಬೌನ್ಸ್,ಅಪಘಾತ ಪರಿಹಾರ,ವಿಚ್ಛೇದನ ಇತ್ಯಾದಿ ಪ್ರಕರಣಗಳನ್ನು ಕೆಳಹಂತದಲ್ಲಿಯೇ ಬಗೆಹರಿಸಿಕೊಳ್ಳುವುದರಿಂದ ಸಮಯ,ಹಣ ಉಳಿತಾಯ ಆಗುತ್ತದೆ. ಕೊಲೆ ಸುಲಿಗೆ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ಮಾತನಾಡಿ,ಲೋಕ್ ಅದಾಲತ್ ಕುರಿತು ವ್ಯಾಪಕ ಮಾಹಿತಿ ಜಾಗೃತಿ ಮೂಡಿಸಿ,ಆದಷ್ಟು ಹೆಚ್ಚು ಪ್ರಕರಣ ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನ ಆಗಬೇಕು. ತನ್ಮೂಲಕ ಲೋಕ್ ಅದಾಲತ್ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು,ಸಾರ್ವಜನಿಕರು ಸಹಕರಿಸಬೇಕೆಂದರು.
ಪಿಎಐ ಸಿದ್ದಪ್ಪ ಗುಡಿ,ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ,ಬಿಇಒ ಎನ್ ಆರ್ ಹೆಗಡೆ,ವಿವಿಧ ಇಲಾಖೆಯ ಅಧಿಕಾರಿಗಳು, ಭಾಗವಹಿಸಿದ್ದರು.