ಸಿದ್ದಾಪುರ: ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗದ್ದೆನಾಟಿ ಮೂಲಕ ಕೃಷಿ ಅಧ್ಯಯನ ಪ್ರಾರಂಭಿಸಿದರು. ಸೀನ ಸೆಟ್ಟರು ನಮ್ಮ ಟೀಚರು ಹಾಗೂ ಪರಿಸರ ಅಧ್ಯಯನದ ಕೃಷಿ ಪಾಠದ ಪ್ರಾಯೋಗಿಕ ಅನುಭವಕ್ಕಾಗಿ ಹತ್ತಿರದ ಹೆಮಜೆನಿ ಮಜರೆಯ ಲೋಕೇಶ ಪದ್ಮನಾಭ ಗೌಡ ಇವರ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದರು.
ಪ್ರತಿವರ್ಷವೂ ಗದ್ದೆನಾಟಿ ಮಾಡುವುದರ ಮೂಲಕ ಕೃಷಿ ಅಧ್ಯಯನ ನಡೆಸುವ ಈ ಶಾಲಾ ಮಕ್ಕಳು ಈ ವರ್ಷವೂ ಇದನ್ನು ಮುಂದುವರೆಸಿದ್ದಾರೆ. ಶಾಲೆಯ 4 ಮತ್ತು 5ನೇ ತರಗತಿಯ 13 ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ಪಾಲ್ಗೊಂಡು ಒಂದು ತಾಸಿನಲ್ಲಿ ಅಂದಾಜು 6 ಗುಂಟೆ ಕ್ಷೇತ್ರದಲ್ಲಿ ನಾಟಿಕಾರ್ಯ ಮಾಡಿ ಕೃಷಿ ಅನುಭವ ಪಡೆದರು. ಈ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊದಲನೆ ಬಾರಿ ಗದ್ದೆಗೆ ಇಳಿದು ನಾಟಿ ಕಾರ್ಯ ಮಾಡಿದ್ದು ವಿಶೇಷವಾಗಿತ್ತು.
ಅಲ್ಲದೇ ಈ ವಿದ್ಯಾರ್ಥಿಗಳು ನಾಟಿ ಕಾರ್ಯದ ಜೊತೆ ಗದ್ದೆ ಕೊಯ್ಲು ಹಾಗೂ ಭತ್ತ ಸೆಳೆಯುವ ಕಾರ್ಯ ಮಾಡಲಿದ್ದಾರೆ. ಒಟ್ಟಾರೆಯಾಗಿ ಮಕ್ಕಳಿಗೆ ಕೃಷಿ ಕುರಿತು ಆಸಕ್ತಿ ಮೂಡಿಸುವುದು ಹಾಗೂ ಪಾಠದ ಪ್ರಾಯೋಗಿಕ ಅನುಭವ ನೀಡುವುದು ಮುಖ್ಯ ಉದ್ದೇಶವಾಗಿತ್ತು ಎಂದು ಶಾಲೆಯ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ನುಡಿಯುತ್ತಾರೆ.
ಸ್ಥಳದಲ್ಲಿ ಗದ್ದೆಯ ಮಾಲಿಕರಾದ ಲೋಕೇಶ ಪದ್ಮನಾಭ ಗೌಡ, ಶ್ವೇತ ಲೋಕೇಶ ಗೌಡ ಹಾಗೂ ಲಕ್ಷ್ಮಿ ಈಶ್ವರ ಗೌಡ ಇವರು ಸಸಿ ನೆಡುವ ವಿಧಾನವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.