ಭಟ್ಕಳ: ಬಿಜೆಪಿ ಮಂಡಲ ಮತ್ತು ಯುವ ಮೋರ್ಚಾ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹರ್ ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ತಿರಂಗ ಯಾತ್ರೆಯ ಬೈಕ್ ರ‌್ಯಾಲಿಯು ಯಶಸ್ವಿಯಾಗಿ ನಡೆಯಿತು.
ಬಿಜೆಪಿ ಬೈಕ್ ರ‌್ಯಾಲಿಗೂ ಮುನ್ನ ಮಾತನಾಡಿದ ಮಾಜಿ ಶಾಸಕ ಸುನೀಲ ನಾಯ್ಕ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ ಕಾರ್ಯಕ್ರಮ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತಿರಂಗ ಯಾತ್ರೆ ಎನ್ನುವ ಬೈಕ್ ರ‌್ಯಾಲಿ ನಡೆಸಲಾಗಿದೆ. ಸ್ವಾತಂತ್ರ್ಯ ದಿನವನ್ನು ಹಿಂದೆ ಹೇಗೆ ಆಚರಣೆ ಮಾಡುತ್ತಿದ್ದರು ಅನ್ನೋದು ಗೊತ್ತು. ಆದರೆ ಈಗ ಕಳೆದ ಮೂರು ವರ್ಷಗಳಿಂದ ವಿಶೇಷ ಹಾಗೂ ವಿನೂತನವಾಗಿ ಮನೆ ಮನೆಗೆ ಮುಟ್ಟುವ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಣೆ ಮಾಡುತ್ತಿದ್ದರು. ಆದರೆ ಈಗ ನರೇಂದ್ರ ಮೋದಿಯವರು ಕಳೆದ ಮೂರು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆಗೆ ಒಂದು ವಿಶೇಷತೆ ಮತ್ತು ಗೌರವ ಪೂರ್ವಕವಾಗಿ ಮಾಡುವ ಉದ್ದೇಶದಿಂದ ಪ್ರತಿಯೊಂದು ಮನೆ ಮನೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬೇಕು ಎನ್ನುವ ಆದೇಶ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಈ ಉದ್ದೇಶಕ್ಕಾಗಿ ಇಂದು ಭಟ್ಕಳದಲ್ಲಿ ಬಿಜೆಪಿ ಮಂಡಲ ಹಾಗೂ ಯುವ ಮೋರ್ಚಾದಿಂದ ಅರಿವು ಮೂಡಿಸಲು ಬೈಕ್ ರಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಪ್ರತಿಯೊಂದು ಮನೆಯ ಮೇಲೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜವನ್ನು ಹಾರಿಸಬೇಕು ಎಂದು ಮೂರು ದಿನದ ಮುಂಚಿತವಾಗಿ ಹರ್ ಘರ್ ತಿರಂಗ ಎನ್ನುವ ಶೀರ್ಷಿಕೆ ಅಡಿ ಅರಿವು ಮೂಡಿಸಲಾಗುತ್ತಿದೆ. ಈ ಮೊದಲು ಸಂಘ ಸಂಸ್ಥೆಗಳ ಕಟ್ಟಡ ಹಾಗೂ ಸರ್ಕಾರಿ ಕಟ್ಟಡ ಮೇಲೆ ಮೇಲೆ ಮಾತ್ರ ರಾಷ್ಟ್ರ ಧ್ವಜ ಹಾರಿಸಬೇಕು ಎನ್ನುವ ಸೂಚನೆ ಇತ್ತು. ಬಳಿಕ ಸಂಸತ್ತಿನಲ್ಲಿ ಪ್ರತಿಯೊಂದು ಮನೆಯಲ್ಲಿಯೂ ರಾಷ್ಟ್ರ ಧ್ವಜ ಹಾರಿಸಬೇಕು ಎನ್ನುವ ನಿಯಮ ಜಾರಿಗೆ ತಂದು ಸಾರ್ವಜನಿಕರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟರು. ದೇಶದಲ್ಲಿರುವ 140 ಕೋಟಿ ಜನರಲ್ಲಿ ನಾನು ಭಾರತೀಯ ಮತ್ತು ರಾಷ್ಟ್ರ ಧ್ವಜದ ಬಗ್ಗೆ ಹೆಮ್ಮೆ ಹಾಗೂ ರಾಷ್ಟ್ರೀಯತೆಯ ಭಾವನೆ ಬರಬೇಕು ಎನ್ನುವ ಕಾರಣದಿಂದ ಸತತ 900 ವರ್ಷ ಕಾಲ ಪರಕೀಯರ ದಾಳಿಯಿಂದ ತೊಲಗಿದ ಸವಿ ನೆನಪಿಗಾಗಿ ಈ ಕಾರ್ಯಕ್ರಮವನ್ನು 2022 ರಿಂದ ಆಚರಿಸಿಕೊಂಡು ಬಂದಿದ್ದೇವೆ ಎಂದರು.
ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ತಾಲೂಕಿನ ಜನತೆಗೆ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ತಿರಂಗ ಯಾತ್ರೆಯನ್ನು ನಾವು ಹಮ್ಮಿಕೊಂಡಿದ್ದೇವೆ. ಆಗಸ್ಟ್ ೧೩ ರಿಂದ ೧೫ರ ತನಕ ಸಾರ್ವಜನಿಕರು ಪ್ರತಿ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು ಎಂದರು.
ಬೈಕ್ ರಾಲಿಯು ಮಣ್ಣುಳಿಯಲ್ಲಿರುವ ಬಿಜೆಪಿ ಕಚೇರಿಯಿಂದ ಪ್ರಾರಂಭಗೊಂಡು ಮೂಡಭಟ್ಕಳ ಬೈಪಾಸ್, ಹೂವಿನ ಮಾರುಕಟ್ಟೆ ಮುಖ್ಯ ರಸ್ತೆ ಆಸರಕೇರಿ, ಸೋನಾರಕೇರಿ ಮಾರ್ಗವಾಗಿ ಶಂಶುದ್ದಿನ್ ಸರ್ಕಲ್ ನಿಂದ ಹೊರಟು ಹಳೆ ಬಸ್ ನಿಲ್ದಾಣದ ಮಾರ್ಗದಿಂದ ಚನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಮುಕ್ತಾಯಗೊಂಡಿತು.