ಜೋಯಿಡಾ: ಪಶ್ಚಿಮ ದಕ್ಷಿಣ ರೈಲ್ವೆ ವಿಭಾಗದ ಲೋಂಡಾ-ವಾಸ್ಕೋ ರೈಲು ಮಾರ್ಗದ ಕ್ಯಾಸಲ್ ರಾಕ್ ಹತ್ತಿರದ ದೂಧಸಾಗರ ಬಳಿ ಬ್ರಗಾಂಜಾ ಘಾಟ್‌ನಲ್ಲಿ ಹಳಿ ತಪ್ಪಿದ ಸರಕು ಸಾಗಣೆ ರೈಲಿನ ಬೋಗಿಗಳನ್ನು ತೆರವುಗೊಳಿಸಿ ರೈಲು ಮಾರ್ಗ ಸರಿಪಡಿಸುವ ಕಾರ್ಯ ಶನಿವಾರವು ಮುಂದುವರೆದಿದೆ. ಈವರೆಗೆ ಏಳು ಬೋಗಿಗಳನ್ನು ತೆಗೆಯುವಲ್ಲಿ ರೈಲ್ವೇ ಇಲಾಖೆ ಯಶಸ್ವಿಯಾಗಿದ್ದು, ಉಳಿದ ಬೋಗಿಗಳನ್ನು ತೆಗೆದು ರೈಲು ಹಳಿ ಸರಿಪಡಿಸಲು ಇನ್ನೆರಡು ದಿನಗಳ ಕಾಲ ಬೇಕಾಗಲಿದ್ದು, ಅಲ್ಲಿಯವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಶುಕ್ರವಾರ ಬೆಳಗ್ಗೆ 9:30 ರ ಸುಮಾರಿಗೆ ಗೋವಾದಿಂದ ಕರ್ನಾಟಕಕ್ಕೆ ಕಲ್ಲಿದ್ದಲು ತುಂಬಿಕೊಂಡು ಬರುತ್ತಿದ್ದ ಸರಕು ಸಾಗಣೆ ರೈಲು ದೂಧಸಾಗರ ಮತ್ತು ಸೋನಾವಳಿ ನಡುವಿನ ಸುರಂಗ ಸಂಖ್ಯೆ 15 ರ ಬಳಿ ಹಳಿತಪ್ಪಿತ್ತು. ಅದರಲ್ಲಿ 16 ರೈಲ್ವೇ ಭೋಗಿಗಳು ಕೆಳಕ್ಕೆ ಬಿದ್ದಿದ್ದು, ಒಂದು ಭೋಗಿ ಕಣಿವೆಗೆ ಬಿದ್ದಿದೆ. ಹಾಗಾಗಿ ಈ ರೈಲು ಮಾರ್ಗವನ್ನು ಸದ್ಯದಲ್ಲಿ ಸಂಪೂರ್ಣವಾಗಿ ಮುಚ್ಚಲಾಗಿದೆ.
ಪಶ್ಚಿಮ ದಕ್ಷಿಣ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಅರವಿಂದ ಶ್ರೀವಾಸ್ತವ, ಸಹಾಯಕ ಕೆ.ಎಸ್.ಜೈನ್ ಅವರು ಸ್ಥಳದಲ್ಲಿ ಮುಕ್ಕಾಂ ಹೂಡಿದ್ದು, ಕ್ರೇನ್ ಮತ್ತು ಇತರ ಅಗತ್ಯ ಯಂತ್ರೋಪಕರಣಗಳನ್ನು ಬಳಸಿ ಹಳಿತಪ್ಪಿದ ಡಬ್ಬಿಗಳನ್ನು ತೆಗೆಯುವ ಕಾರ್ಯವು ಭರದಲ್ಲಿ ಸಾಗಿದೆ. ರೈಲು ಕುಸಿತದ ಜೊತೆಗೆ ಸರಕು ಸಾಗಣೆಯ ಕುಸಿತದಿಂದಾಗಿ, ಟ್ರ್ಯಾಕ್‌ಗಳನ್ನು ಸರಿಪಡಿಸಲು ಮತ್ತು ಭೋಗಿಗಳನ್ನು ತೆಗೆದುಹಾಕಲು ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಈ ಮಾರ್ಗದ ದುರಸ್ತಿ ಹಾಗೂ ರೈಲು ಸಂಚಾರ ಸರಿಪಡಿಸಲು ಇನ್ನೆರಡು ದಿನ ಬೇಕಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ.