ಸಿದ್ದಾಪುರ : ಮಳೆಗಾಲ ಬಂತೆಂದರೆ ಸಾಕು ಆ ಊರಿಗೆ ಹಲವಾರು ಸಂಕಷ್ಟಗಳು ಎದುರಾಗುತ್ತವೆ. ವಾಹನಗಳ ಓಡಾಟಕ್ಕೆ ರಸ್ತೆ ಇಲ್ಲ, ಇದ್ದ ರಸ್ತೆಯಲ್ಲಿ ಹೊಂಡ ಗುಂಡಿಗಳು ಉಂಟಾಗಿ ಕೆಸರು ಗದ್ದೆಯಂತಾಗುತ್ತದೆ. ಶಾಲೆ, ಕಾಲೇಜು ಹೋಗುವ ವಿದ್ಯಾರ್ಥಿಗಳು ಸಂಕಷ್ಟದ ನಡುವೆ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮೇಲಿನ ಮಳೆಗೆ ಛತ್ರಿಯನ್ನು ಹಿಡಿಯಬಹುದು ಆದರೆ ಕೆಳಗಿನ ಕೆಸರು ರಸ್ತೆಗೆ ಯಾವ ಪರ್ಯಾಯ ವ್ಯವಸ್ಥೆ ಇದೆ ಹೇಳಿ ನೋಡೋಣ ಎಂದು ತಾಲೂಕಿನ ಕಾನಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಬೈಲ್ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಇಲ್ಲಿರುವ ರಸ್ತೆಯು ಮಣ್ಣು ರಸ್ತೆಯಾಗಿದ್ದು ಹೊಂಡಗಳಿಂದ ಮಳೆಗಾಲದಲ್ಲಿ ಸಂಪೂರ್ಣ ಸಂಚಾರ ಕಡಿತಗೊಳ್ಳುತ್ತದೆ. ಅಕ್ಕಿ ಮಾಡಿಸಲು ಭತ್ತವನ್ನು ಹೊತ್ತುಕೊಂಡು ಮುಖ್ಯ ರಸ್ತೆಗೆ ಬರಬೇಕು, ಅನಾರೋಗ್ಯ ಉಂಟಾದರೆ ಜೋಳಿಗೆಯಲ್ಲಿ ಹೊತ್ತುಕೊಂಡು ಬರಬೇಕು ಹೀಗೆ ಈ ಊರಿನ ಸಮಸ್ಯೆ ಒಂದೆರಡಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಕಳೆದ ಒಂದು ವರ್ಷದ ಹಿಂದೆ ಮಂಜೂರಿಯಾದ ರಸ್ತೆಯು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಲ್ಯಾಪ್ಸ್ ಗ್ರಾಂಟ್ ಆಗಿ ಹೋಗಿದೆ ಎಂದು ಆರೋಪಿಸಿದ್ದಾರೆ. ಜೆಜೆಎಂ ಯೋಜನೆಯವರು ರಸ್ತೆ ಮಧ್ಯದಲ್ಲಿ ಹೊಂಡ ತೆಗೆದು ಪೈಪ್ ಅಳವಡಿಸಿ ಸುರಕ್ಷತ ಕ್ರಮ ವಹಿಸದೆ ವಾಹನ ಸಿಲುಕಿಕೊಳ್ಳುವಂತೆ ಮಾಡಿದ್ದಾರೆ. ಸ್ಥಳೀಯ ಪಂಚಾಯತ್ ಸದಸ್ಯರು ಪಿಡಿಓಗಳು ಎಷ್ಟೇ ಹೇಳಿದರೂ ನಮ್ಮ ಸಮಸ್ಯೆಯನ್ನು ಆಲಿಸುತ್ತಿಲ್ಲ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ನಮಗೆ ಸುವ್ಯವಸ್ಥೆಯ ರಸ್ತೆಯನ್ನು ಮಾಡಿಕೊಡಿ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜನಾರ್ಧನ್, ಮಹೇಶ್, ಜಯಶೀಲ್ ಕುಮಾರ್, ಕೃಷ್ಣ, ಜೈಶೀಲ ಕೆ. ಸದಾಶಿವ ಸಂತೋಷ, ಮಂಜು ಲೋಕೇಶ್ ನಾಗರಾಜ್ ಯಶವಂತ ಮಧು ಪ್ರದೀಪ್ ಈಶ್ವರ್ ಲೊಕೇಶ ಜಿ, ಗುಡದ್ದಯ್ಯ ಮತ್ತಿತರರು ಇದ್ದರು.