ಶಿರಸಿ: ಕಳೆದ ಕೆಲ ದಿನದ ಹಿಂದೆ ಯಲ್ಲಾಪುರದ ಟಿಎಸ್ಎಸ್ ಶಾಖೆಯಲ್ಲಿ ಅಡಿಕೆ ಮಾರಾಟದಲ್ಲಾದ ಮೋಸದ ಕುರಿತಾಗಿ ಪೊಲೀಸ್ ದೂರನ್ನು ದಾಖಲಿಸಲಾಗಿದ್ದು, ಈ ಕೂಡಲೇ ಪೋಲೀಸ್ ಇಲಾಖೆ ತುರ್ತು ಕ್ರಮ ಕೈಗೊಂಡು ಮೋಸಹೋದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ನಿಜಾಂಶವನ್ನು ಬಯಲು ಮಾಡುವ ಮೂಲಕ ರೈತ ಸಮುದಾಯವನ್ನು ಉಳಿಸಬೇಕು ಎಂದು ಎಸ್. ಜಿ. ಭಟ್ಟ ಉಲ್ಲಾಳ ಕೊಪ್ಪ ಹಾಗು ದೂರು ನೀಡಿರುವ ಪಿರ್ಯಾದುದಾರರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಯಲ್ಲಾಪುರ ಶಾಖೆಯಲ್ಲಿ ಅಡಿಕೆ ಟೆಂಡರ್ ಪ್ರಕ್ರಿಯೆಯಲ್ಲಿ ಹಾಲಿ ಆಡಳಿತ ಮಂಡಳಿ ಭಾರೀ ಗೋಲ್ ಮಾಲ್ ಕಳೆದೊಂದು ವರ್ಷದಿಂದ ಮಾಡುತ್ತಾ ಬಂದಿರುವ ಗುಮಾನಿಯಿದೆ. ಜೊತೆಗೆ ಅಡಿಕೆ ಟೆಂಡರ್ ಗರಿಷ್ಟ ಬೆಲೆ ರೈತರಿಗೆ ದೊರಕುವಂತೆ ಮಾಡುವ ಬದಲು, ಎಪಿಎಂಸಿ ದರವನ್ನು ಕೈಯಲ್ಲಿ ತಿದ್ದುವ ಮೂಲಕ ರೈತರ ಹಣವನ್ನು ತಾವು ಲಪಟಾಯಿಸುವಂತೆ ಕಂಡು ಬರುತ್ತಿದೆ. ಈಗಾಗಲೇ ಇದು ಸಾಬೀತಾಗಿದ್ದು, ರೈತರು ಇಂತವರ ವಿರುದ್ಧ ದಂಗೆಯೇಳಬೇಕಾದ ಪರಿಸ್ಥಿತಿ ಇರುವಂತಿದೆ. ಶಾಖಾ ವ್ಯವಸ್ಥಾಪಕರನ್ನು ಕೇಳಿದರೆ ತಾನು ಹೊಸಬ ಎಂಬ ಕಾರಣ ಹೇಳುತ್ತಿದ್ದಾರೆ. ಇದರಲ್ಲಿ ನೇರವಾಗಿ ಹಾಲಿ ಆಡಳಿತ ಮಂಡಳಿಯ ನಿರ್ದೇಶಕರು ಹಾಗು ಅಧ್ಯಕ್ಷರ ಕೈವಾಡ ಸಾಬೀತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ಒಂದು ತಿಂಗಳಿನ ವ್ಯಾಪಾರಿ ದರಪಟ್ಟಿಯನ್ನು ನಾವು ಲಿಖಿತವಾಗಿ ಕೇಳಿದರೂ ಸಹ ಟಿಎಸ್ಎಸ್ ಅವರು ನೀಡುತ್ತಿಲ್ಲ. ಎಪಿಎಂಸಿಯವರು ಈಗಾಗಲೇ ದರಪಟ್ಟಿಯನ್ನು ನೀಡಿದ್ದಾರೆ. ಇದರರ್ಥ ಈಗಾಗಲೇ ಹಲವಾರು ತಿಂಗಳುಗಳಿಂದ ಈ ರೀತಿಯ ಅವ್ಯವಹಾರ ನಡೆದಿರುವುದರಿಂದ ಹಾಲಿ ಆಡಳಿತ ಮಂಡಳಿ ಮಾಹಿತಿ ನೀಡುತ್ತಿಲ್ಲವೆಂದು ಕಾಣುತ್ತಿದೆ ಎಂದರು.
ಟೆಂಡರ್ ಪ್ರಕ್ರಿಯೆಯಲ್ಲಿ ರೈತರಿಗೆ ಬೇಕೆಂತಲೇ ಮೋಸ ಮಾಡಲಾಗುತ್ತಿದ್ದು, ಕಳೆದ ಒಂದು ವರ್ಷದಿಂದ ರೈತರ ಹಣವನ್ನು ದೋಚುತ್ತಿದ್ದಾರೆ. ಟೆಂಡರ್ ನಲ್ಲಿ ಗರಿಷ್ಠ ದರದ ಬದಲು ಎರಡನೇ ಗರಿಷ್ಟ ಬೆಲೆಯನ್ನು ರೈತರಿಗೆ ನೀಡುವ ಮೂಲಕ ಭಾರೀ ಪ್ರಮಾಣದಲ್ಲಿ ಹಣದ ಮೋಸ ನಡೆದಿದ್ದು, ಇದಕ್ಕೆ ಹಾಲಿ ಆಡಳಿತ ಮಂಡಳಿ ಸಂಪೂರ್ಣ ಬಾಧ್ಯಸ್ಥರಾಗಿದ್ದು, ಈ ಕೂಡಲೇ ರೈತರ ಹಣವನ್ನು ಸಂಪೂರ್ಣವಾಗಿ ರೈತರಿಗೆ ಒಪ್ಪಿಸಬೇಕು ಮತ್ತು ಈ ಹಿಂದಿನ ಎಲ್ಲಾ ಟೆಂಡರ್ ದರವನ್ನು ಪರಿಶೀಲಿಸಿ, ರೈತರಿಗೆ ಹಣವನ್ನು ಮರುಪಾವತಿ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.