ಶ್ರೀಧರ ವೈದಿಕ: ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಸತತ ಮಳೆ ಸುರಿಯುತ್ತಿರುವುದರಿಂದ ಅಡಿಕೆಗೆ ಕೊಳೆ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಕೆಲ ರೈತರು ಒಂದು ಬಾರಿ ಔಷಧಿ ಸಿಂಪಡಿಸಿದ್ದು, ನಿರಂತರವಾಗಿ ಮಳೆಯಿಂದಾಗಿ ಹೆಚ್ಚಿನವರು ಒಮ್ಮೆಯೂ ಔಷಧಿ ಸಿಂಪಡಿಸಲು ಸಾಧ್ಯವಾಗಿಲ್ಲ. ಇದರಿಂದ ಕೊಳೆರೋಗ ವ್ಯಾಪಕವಾಗಿ ಹರಡುತ್ತಿದೆ. ತೋಟದ ತುಂಬೆಲ್ಲ ಎಳೆ ಅಡಿಕೆಗಳು ರಾಶಿ ರಾಶಿಯಾಗಿ ಉದುರುತ್ತಿವೆ.
ತಾಲೂಕಿನ ಸುಮಾರು 1500 ಹೆಕ್ಟರ್ ಪ್ರದೇಶದಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ವಜ್ರಳ್ಳಿ, ಚಿಮನಳ್ಳಿ, ತಾರಗಾರ, ಬೀಗಾರ, ಅಂಬಗಾಂವ, ಹೊನಗದ್ದೆ, ಮಾವಿನಮನೆ, ಬಾರೆ, ಹಿರಿಯಾಳ, ಶಿಸ್ತಮುಡಿ, ಉಮ್ಮಚಗಿ, ಸೋಮನಳ್ಳಿ, ಹಿತ್ಲಳ್ಳಿ, ಕವಡಿಕೆರೆ, ನಂದೊಳ್ಳಿ, ಮಾಗೋಡ ಭಾಗಗಳಲ್ಲಿ ಕೊಳೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಉಳಿದಂತೆ ಎಲ್ಲಾ ಗ್ರಾಮೀಣ ಭಾಗಗಳಲ್ಲೂ ಕೊಳೆರೋಗ ವ್ಯಾಪಿಸಿದೆ. ಔಷಧಿ ಸಿಂಪಡಣೆಗೆ ಮಳೆ ಅಡ್ಡಿಯಾಗಿದ್ದು, ಬೆಳೆಗಾರರ ಚಿಂತೆ ಹೆಚ್ಚಿಸಿದೆ. ಕಳೆದ ವರ್ಷ ಬರಗಾಲ ಹಾಗೂ ಎಲೆ ಚುಕ್ಕೆ ರೋಗದಿಂದ ಬೆಳೆ ನಷ್ಟವಾಗಿತ್ತು. ಬೇಸಿಗೆಯ ಬಿರುಬಿಸಿಲಿನಿಂದ ನೀರಿನ ಕೊರತೆ ಉಂಟಾಗಿ ಅಡಕೆಯ ಸಿಂಗಾರ ಒಣಗಿ, ಬರುವ ಸೀಜನ್ ನಲ್ಲಿ ಅರ್ಧದಷ್ಟು ಬೆಳೆ ಕಡಿಮೆಯಾಗುವ ಮುನ್ಸೂಚನೆ ದೊರಕಿತ್ತು. ಈಗ ಅತಿಯಾದ ಮಳೆ ಹಾಗೂ ಕೊಳೆರೋಗದಿಂದ ಇನ್ನಷ್ಟು ಬೆಳೆ ನಷ್ಟ ಉಂಟಾಗುವ ಆತಂಕ ಎದುರಾಗಿದೆ. ಅಡಕೆಯ ಎಳೆ ಮಿಳ್ಳೆಗಳು ಉದುರುವ ಪ್ರಮಾಣವೂ ಈ ಬಾರಿ ಹೆಚ್ಚಾಗಿಯೇ ಇದೆ.
ನಿಯಂತ್ರಣ ಹೇಗೆ?
ಕೊಳೆರೋಗ ಕಂಡು ಬಂದಲ್ಲಿ ಕೊಳೆರೋಗ ಪೀಡಿತ ಅಡಕೆಗಳನ್ನು ತೋಟದಿಂದ ಹೊರಹಾಕಬೇಕು. ಕೊಳೆರೋಗ ಪೀಡಿತ ಅಡಕೆ ಕೊನೆಯ ಕೆಳಭಾಗದ 3-4 ಹೆಡೆಗಳಿಗೆ ಹಾಗೂ ಸುತ್ತಲಿನ 3-4 ಮರಗಳಿಗೆ ಮ್ಯಾಟಲಾಕ್ಸಿಲ್ ಮತ್ತು ಮ್ಯಾಂಕೊಜೆಬ್ ಇರುವ ಶಿಲೀಂಧ್ರನಾಶಕ ಸಿಂಪಡಿಸಬೇಕು. ಒಂದು ವಾರದ ನಂತರ ಬೋರ್ಡೊ ದ್ರಾವಣ ಸಿಂಪಡಿಸಿದರೆ ಕೊಳೆರೋಗ ನಿಯಂತ್ರಿಸಬಹುದು ಎಂದು ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಕೊಳೆರೋಗದಿಂದ ಸಾಕಷ್ಟು ಹಾನಿ ಉಂಟಾಗುತ್ತಿದ್ದು, ಈ ಬಗ್ಗೆ ಸರ್ಕಾರ, ತೋಟಗಾರಿಕಾ ಇಲಾಖೆ ಗಮನ ಹರಿಸಬೇಕು. ಬೆಳಹಾನಿಯ ಸಮೀಕ್ಷೆ ಮಾಡಿ, ಕೊಳೆರೋಗಪೀಡಿತ ತೋಟದ ರೈತರಿಗೆ ಯೋಗ್ಯ ಪರಿಹಾರ ನೀಡಬೇಕು. — ನಾಗರಾಜ ಕವಡಿಕೆರೆ,
ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷರು