ಯಲ್ಲಾಪುರ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಹೊರಟಿರುವ ನೂತನ ಸಹಕಾರಿ ಕಾಯ್ದೆಯ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಕೃಷಿ, ಕೃಷಿಕ ಹಾಗೂ ಕೃಷಿಪತ್ತು ಸಂಘಗಳ ಶ್ರೇಯೋಭಿವೃಧ್ದಿ ಟ್ರಸ್ಟ್ ಶಿರಸಿ ಇದರಡಿ, ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ನೇತೃತ್ವದಲ್ಲಿ ಸಹಕಾರಿಗಳ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರನ್ನು ರಾಜಭವನದಲ್ಲಿ ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
ತರಾತುರಿಯಲ್ಲಿ ರಾಜ್ಯ ಸರ್ಕಾರ, ಸಹಕಾರಿ ಸಂಘ ಮತ್ತು ರೈತ ವಿರೋಧಿಯಾದ ಈ ವಿಧೇಯಕವನ್ನು ಪಾಸುಮಾಡಿ ಜಾರಿಗೊಳಿಸಲು ಉದ್ದೇಶಿಸಿದೆ. ಮೀಸಲಾತಿ ಹೇರಿ ತನ್ನ ರಾಜಕೀಯ ಲಾಭ ಪಡೆಯಲು ಸಹಕಾರಿ ಸಂಘವನ್ನು ರಾಜ್ಯ ಸರಕಾರ ಈ ಕಾಯ್ದೆ ಮೂಲಕ ದುರುಪಯೋಗ ಮಾಡಲು ಹವಣಿಸಿದೆ. ಈ ಸಹಕಾರಿ ರೈತವಿರೋಧಿ ವಿಧೇಯಕವನ್ನು ಕೈಬಿಡುವಂತೆ ಜಿಲ್ಲೆಯ ಸಹಕಾರಿಗಳು ಒತ್ತಾಯಿಸಿದರು. ಈ ಬಗ್ಗೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ, ವಿಧೇಯಕ ಹಿಂಪಡೆಯುವಂತೆ ಹರಿಪ್ರಕಾಶ ಕೋಣೆಮನೆ ಅವರು ರಾಜ್ಯಪಾಲರಿಗೆ ಕೋರಿ, ಕಾಯ್ದೆ ಅನುಷ್ಠಾನದಿಂದ ಆಗುವ ನಷ್ಟದ ಕುರಿತು ವಿವರಿಸಿದರು. ರಾಜ್ಯಪಾಲರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಿಯೋಗದಲ್ಲಿ ಯಲ್ಲಾಪುರ್ ಟಿ.ಎಂ.ಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಯಡಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್.ಹೆಗಡೆ, ಬಿಸ್ಲಕೊಪ್ಪದ ಮಹೇಂದ್ರ ಭಟ್ಟ, ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಆನಗೋಡ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಗಣಪತಿ ಮಾನಿಗದ್ದೆ, ಮಾವಿನಮನೆ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ವಜ್ರಳ್ಳಿಯ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ, ಹೈಕೋರ್ಟ್ ನ್ಯಾಯವಾದಿ ವಿನಾಯಕ ಭಟ್ಟ ಇತರರಿದ್ದರು.