ಸಂದೇಶ್ ಎಸ್.ಜೈನ್, ದಾಂಡೇಲಿ
ದಾಂಡೇಲಿ : ನಗರ ಮತ್ತು ಕುಳಗಿ, ಅಂಬಿಕಾನಗರ ಪ್ರದೇಶವನ್ನು ಸಂಪರ್ಕಿಸುವ ಕುಳಗಿ ರಸ್ತೆಯ ಸೇತುವೆ ದುಸ್ಥಿತಿಯಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ.
1967 ರಲ್ಲಿ ನಿರ್ಮಾಣಗೊಂಡ ಈ ಸೇತುವೆ ಕಳೆದ 57 ವರ್ಷಗಳಿಂದ ದಾಂಡೇಲಿ ಹಾಗೂ ದಾಂಡೇಲಿಯ ಸುತ್ತಮುತ್ತಲ ಜನತೆಯ ದೈನಂದಿನ ಬದುಕಿನಲ್ಲಿ ಬೆಸೆದುಕೊಂಡಿದೆ. ಕಾಲಕಾಲಕ್ಕೆ ಈ ಸೇತುವೆಯ ದುರಸ್ತಿ ಮತ್ತು ಸಮರ್ಪಕ ನಿರ್ವಹಣೆ ಮಾಡದೇ ಇರುವುದರಿಂದ ಇಂದು ಈ ಸೇತುವೆ ಅಪಾಯದ ಮಟ್ಟದಲ್ಲಿದೆ.
ಸೇತುವೆಯ ಎರಡು ಬದಿಗಳಲ್ಲಿರುವ ತಡೆಗೋಡೆ ಇಂದೋ ನಾಳೆಯೋ ಸಂಪೂರ್ಣ ಬೀಳುವ ಸ್ಥಿತಿಯಲ್ಲಿದೆ. ಈಗಾಗಲೇ ಸೇತುವೆಯ ಎರಡು ಬದಿಯ ತಡೆಗೋಡೆಯ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕೆಲವೆಡೆ ತುಂಡು ತುಂಡಾಗಿ ಬಿದ್ದು ಹೋಗಿದೆ. ಇನ್ನೂ ಸೇತುವೆಯ ಅಲ್ಲಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರಿಗೂ ಸಂಕಷ್ಟ ಎದುರಾಗಿದೆ. ಸೇತುವೆಯ ಕೆಳಭಾಗದಲ್ಲಿ ಗಿಡಗಂಟಿಗಳು ಬೆಳೆದು ನಿಂತು ಸೇತುವೆಯ ಆಯಸ್ಸನ್ನು ಕ್ಷೀಣಿಸುತ್ತಿದೆ.
ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ವಾಯು ವಿಹಾರಕ್ಕಾಗಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಜನ ಬರುತ್ತಾರೆ. ಇದರ ಹೊರತಾಗಿಯೂ ಸಂಜೆಯ ಸಮಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಇಲ್ಲಿ ಬಂದು ತಡೆಗೋಡೆಗೆ ಒರಗಿಕೊಂಡು ಮೀನು ಹಿಡಿಯುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ. ಇಲ್ಲಿ ಎರಡು ಬದಿಯ ಸೇತುವೆಯಲ್ಲಿರುವ ಫುಟ್ಪಾತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಡುತ್ತಾರೆ. ಕೋಗಿಲಬನ, ಕುಳಗಿ, ಮೃತ್ಯುಂಜಯ ನಗರ ಪ್ರದೇಶ ವ್ಯಾಪ್ತಿಯ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಇದೇ ಸೇತುವೆಯ ಫುಟ್ಪಾತ್ ನಲ್ಲಿ ನಡೆದುಕೊಂಡೆ ಶಾಲೆಗೆ ಹೋಗುತ್ತಾರೆ. ಈ ವಿದ್ಯಾರ್ಥಿಗಳು ಸ್ವಲ್ಪ ಎಚ್ಚರ ತಪ್ಪಿದ್ದಲ್ಲಿ ಅಥವಾ ತಡೆಗೋಡೆಗೆ ಒರಗಿ ನದಿಯನ್ನು ನೋಡುವ ಸಾಹಸಕ್ಕಿಳಿದಲ್ಲಿ ತಡೆಗೋಡೆ ಮುರಿದು ಆ ವಿದ್ಯಾರ್ಥಿಗಳ ಜೀವಕ್ಕೆ ಹಾನಿಯಾಗುವ ಸಾಧ್ಯತೆಯೂ ಇದೆ.
ಈ ಸೇತುವೆಯ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದಲ್ಲಿ, ಕಾರವಾರದ ಸದಾಶಿವಘಡದಲ್ಲಿ ನಡೆದಂತೆ ಈ ಸೇತುವೆಯು ಯಾವುದೇ ಸಂದರ್ಭದಲ್ಲಿ ಕುಸಿದು ಬಹಳ ದೊಡ್ಡದಾದ ಅನಾಹುತ ಅವಘಡಕ್ಕೆ ಕಾರಣವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂಬಂತಹ ಸ್ಥಿತಿಯಲ್ಲಿ ಈ ಸೇತುವೆಯು ಸಧ್ಯಕ್ಕೆ ಕಂಡುಬರುತ್ತಿದೆ
ಕೂಡಲೇ ಈ ಸೇತುವೆಯ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಕಾಲಕಾಲಕ್ಕೆ ಸಮರ್ಪಕವಾಗಿ ಇದರ ನಿರ್ವಹಣೆ ಕಾರ್ಯವನ್ನು ಮಾಡಬೇಕೆಂದು ಸ್ಥಳೀಯ ಸಾರ್ವಜನಿಕರು ಗುರುವಾರ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.