ಬನವಾಸಿ: ಇಲ್ಲಿನ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನ ಕಳೆದ ಹತ್ತು ವರ್ಷಗಳಿಂದ ಸೋರುತ್ತಿದ್ದರೂ ಪುರಾತತ್ವ ಇಲಾಖೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಇಲಾಖೆಯ ವಿರುದ್ಧ ಹೋರಾಟ ನಡೆಸುವ ಕುರಿತು ಬುಧವಾರ ಬನವಾಸಿ ತಾಲ್ಲೂಕು ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಪೂರ್ವಭಾವಿ ಸಭೆ ನಡೆಸಿದರು.
ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ರಥ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಭಟ್ ಮಾತನಾಡಿ, ಪುರಾತತ್ವ ಇಲಾಖೆಯು ಐತಿಹಾಸಿಕ ಬನವಾಸಿಯನ್ನು ಕಡೆಗಣಿಸುತ್ತಿದೆ. ಸರ್ವಾಧಿಕಾರದಿಂದ ಊರು ಹಾಳು ಮಾಡುವುದೇ ಪುರಾತತ್ವ ಇಲಾಖೆಯ ಮುಖ್ಯ ಕೆಲಸವಾಗಿದೆ. ಕಳೆದ ಹತ್ತು ವರ್ಷಗಳಿಂದ ಕಳೆದ ಹತ್ತು ವರ್ಷಗಳಿಂದ ದೇವಸ್ಥಾನ ಮಳೆಗಾಲದಲ್ಲಿ ನಿರಂತರವಾಗಿ ಸೋರುತ್ತಿದೆ. ಸೋರುವಿಕೆಯ ಸಮಸ್ಯೆಯನ್ನು ಪ್ರತಿ ವರ್ಷವೂ ಪುರಾತತ್ವ ಇಲಾಖೆಯ ಗಮನಕ್ಕೆ ತಂದರು ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಪುರಾತತ್ವ ಇಲಾಖೆಯು ಐತಿಹಾಸಿಕ ಹಿನ್ನೆಲೆಯುಳ್ಳ ಬನವಾಸಿಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಕನ್ನಡದ ಪ್ರಥಮ ರಾಜಧಾನಿಗೆ ಪುರಾತತ್ವ ಇಲಾಖೆ ಅವಮಾನಿಸುತ್ತಿದೆ. ಭಗವಂತನ ಗರ್ಭಗುಡಿ ಸೋರುತ್ತಿದೆ. ಭಗವಂತನ ಶಾಂತಿಭಂಗವಾದರೆ ಬನವಾಸಿ ಸರ್ವನಾಶವಾಗುವುದರಲ್ಲಿ ಸಂದೇಹವಿಲ್ಲ. ನಾವೆಲ್ಲರೂ ಜಾಗೃತರಾಗಬೇಕಾಗಿದೆ. ನಮ್ಮ ದೇವಸ್ಥಾನ ಮತ್ತು ಊರು ನಮಗೆ ಬಿಟ್ಟು ಕೊಡಿ ಎಂದು ಆಗ್ರಹಿಸಿ ಮುಂದಿನ ಹೋರಾಟಕ್ಕೆ ಸಜ್ಜುಗೊಳ್ಳೋಣ. ಬನವಾಸಿ ಅಭಿವೃದ್ಧಿ ಮತ್ತು ಸಂರಕ್ಷಣಾ ವೇದಿಕೆ ರಚನೆ ಮಾಡಿ ಪುರಾತತ್ವ ಇಲಾಖೆಯ ತೆಕ್ಕೆಯಲ್ಲಿರುವ ನಮ್ಮ ದೇವಸ್ಥಾನವನ್ನು ರಾಜ್ಯ ಸರ್ಕಾರದ ಪ್ರಾಚ್ಯವಸ್ತು ಇಲಾಖೆಗೆ ಒಳಪಡಿಸಲು ಆಗ್ರಹಿಸೋಣ ಎಂದರು.
ಬನವಾಸಿ ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿದ್ದರು ಪುರಾತತ್ವ ಇಲಾಖೆಯು ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದೆ. ಕೆಲ ವರ್ಷಗಳ ಹಿಂದೆ ಕೆಮಿಕಲ್ ವಾಶ್ ಹೆಸರಿನಲ್ಲಿ ಕಳಪೆ ಮಟ್ಟದಲ್ಲಿ ದುರಸ್ತಿ ಕಾರ್ಯಮಾಡಿ ದೇವಸ್ಥಾನ ಸಂಪೂರ್ಣ ಸೋರುವಂತೆ ಮಾಡಿದೆ. ಈ ಬಾರಿ ಕಾಮಗಾರಿ ಕೈಗೊಳ್ಳುವ ಮೊದಲು ಆ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿದ ಬಳಿಕ ಕಾಮಗಾರಿ ನಡೆಸಬೇಕು. ದೇವಸ್ಥಾನದ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.
ತಾಲ್ಲೂಕು ಹೋರಾಟ ಸಮಿತಿಯ ಗೌರವಾಧ್ಯಕ್ಷ ಸಿ.ಎಫ್ ನಾಯ್ಕ್, ಶ್ರೀಕಂಠಗೌಡ ಮಧುರವಳ್ಳಿ, ಶಿವಕುಮಾರ ದೇಸಾಯಿಗೌಡ, ಭಾನುಪ್ರಕಾಶ ಮಂಗಳೂರು, ರಘು ನಾಯ್ಕ್ ಗುಡ್ನಾಪುರ, ವಿಶ್ವನಾಥ ಹಾದಿಮನಿ, ಸೀಮಾವತಿ ಕೆರೊಡಿ, ಗೀತಾ ಯಜಮಾನಿ, ಸಾಯಿರಾಂ ಕಾನಳ್ಳಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಒಡೆಯರ್, ಗುಣಶೇಖರ ಪಿಳ್ಳೈ, ನರಸಿಂಹ ದೀಕ್ಷಿತ್, ಗಜಾನನ ಗೌಡ, ಅರವಿಂದ ಬಳೆಗಾರ, ಸುಧೀರ್ ನಾಯರ್, ರಾಮಕೃಷ್ಣ ಚೌದರಿ, ಜಯಶಂಕರ ಮೇಸ್ತ್ರಿ, ವೀರಭದ್ರ ಗೌಡ, ದಯಾನಂದ ಮರಾಠೆ, ಸವಿತಾ ಭಟ್, ಶೋಭ ಉಳ್ಳಾಗಡ್ಡಿ, ಶಾಂತ ಸಣ್ಣಲಿಂಗಣ್ಣನವರ, ಜಯಶ್ರೀ ಉಳ್ಳಾಗಡ್ಡಿ, ಗಂಗಾ ಸಹವಾಸಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ಮುಖ್ಯಾಂಶಗಳು:
• ಕಳೆದ ಹದಿನೈದು ವರ್ಷಗಳ ಹಿಂದೆ ಪುರಾತತ್ವ ಇಲಾಖೆ ಮಾಡಿದ ಕೆಮಿಕಲ್ ವಾಶ್ ಕಾಮಗಾರಿ ಹಾಗೂ ತದ ನಂತರದಲ್ಲಿ ದುರಸ್ತಿ ಮಾಡಿ ಲಕ್ಷಾಂತರ ರೂಪಾಯಿಯ ಖರ್ಚು ಮಾಡಿ ಕಳಪೆ ಕಾಮಗಾರಿಯ ಸಂಪೂರ್ಣ ತನಿಖೆಯಾಗಬೇಕು. ಸಂಭವಿಸಿದ ಅಧಿಕಾರಿಗಳು, ಇಲಾಖಾ ಸಿಬ್ಬಂದಿ, ಗುತ್ತಿಗೆದಾರ ವಿರುದ್ಧ ಕಠಿಣಕ್ರಮಕೈಗೊಳ್ಳಬೇಕು.
• ಮುಖಮಂಟಪದ ಮುಂಭಾಗದಲ್ಲಿರುವ ಆನೆಗಳಿಗೆ ಹಾಗೂ ಯಾಗಶಾಲೆ, ಕಾರ್ಯಲಯ, ಊಟದ ವಿಭಾಗ, ಮ್ಯೂಸಿಯಂ, ನೈವೇದ್ಯ ಮನೆಗೆ ಮೇಲ್ಚಾವಣಿ ಮಾಡಬೇಕು.
• ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿರುವ 5 ಎಕರೆ ಜಾಗ ಹಾಗೂ ಮ್ಯೂಸಿಯಂ ಸ್ಥಾಪನೆಗೆ ಮಾಡಿರುವ ಕಟ್ಟಡವನ್ನು ಕರ್ನಾಟಕ ಸರ್ಕಾರದ ಇಲಾಖೆಗೆ ಹಸ್ತಾಂತರಿಸುವುದು.
• ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಕಾನೂನಿನ ಪ್ರಕಾರ ದೇವಸ್ಥಾನದ 300ಮೀ. ಯಾವುದೇ ದುರಸ್ತಿ ಮಾಡಲು ಅನುಮತಿಗೆ ಸಾಕಷ್ಟು ಪರದಾಟ ಹಾಗೂ ಭ್ರಷ್ಟಾಚಾರ ವಾಗುತ್ತಿರುವುದರಿಂದ ನಮ್ಮ ದೇವಸ್ಥಾನವನ್ನು ಕರ್ನಾಟಕ ರಾಜ್ಯ ಸರ್ಕಾರದ ಪ್ರಾಚ್ಯವಸ್ತು ಇಲಾಖೆಗೆ ವಹಿಸಿಕೊಡಬೇಕು.