ಯಲ್ಲಾಪುರ: ಪಂಚ ಗ್ಯಾರಂಟಿ ಅನುಷ್ಟಾನಗೊಳಿಸಿ ದೇಶದಲ್ಲೇ ಮಾದರಿಯಾದ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿಗರು ಹುನ್ನಾರ ನಡೆಸಿ ಮೂಡಾ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನಕ್ಕೆ ನಾಟಕೀಯ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಘಟಕದ ತಾಲೂಕಾ ಅಧ್ಯಕ್ಷೆ ಪೂಜಾ ನೇತ್ರೇಕರ್ ಟೀಕಿಸಿದ್ದಾರೆ.
ಅವರು ಗುರುವಾರ ಈ ಕುರಿತು ಹೇಳಿಕೆ ನೀಡಿ, ಯಡಿಯೂರಪ್ಪ ಅವರ ಮೇಲಿನ ಪೋಕ್ಸೊ ಪ್ರಕರಣಕ್ಕೆ ಪ್ರತಿಕ್ರಿಯಿಸದ ಬಿಜೆಪಿ ನೈತಿಕತೆ ಕಳೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅರಿಶಿನ ಕುಂಕುಮದ ದ್ಯೋತಕವಾಗಿ ನೀಡಿದ ನಿವೇಶನ ಆಗಿನ ಬಿಜೆಪಿ ಸರ್ಕಾರದ ಅಧಿಯಲ್ಲೇ ನೀಡಲಾಗಿತ್ತು. ಅಂದಮೇಲೆ ನಾಟಕದ ಪಾದಯಾತ್ರೆ ಉದ್ದೇಶವೇನು ಎಂದು ಪ್ರಶ್ನಿಸಿದರು.
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಚೊಂಬು ನೀಡಿದ್ದು, ಇದರಿಂದ ರೊಚ್ಚಿಗೇಳಲಿರುವ ರಾಜ್ಯದ ಜನತೆಯ ದಿಕ್ಕು ಬದಲಿಸುವ ಪ್ರಯತ್ನಕ್ಕೆ ಪಾದಯಾತ್ರೆ ಕೈಗೊಂಡಿರುವ ಬಿಜೆಪಿ ನೈತಿಕ ದಿವಾಳಿಯಾಗಿದೆ. ಇದಕ್ಕೆ ಮತ್ತೊಮ್ಮೆ ಭವಿಷ್ಯದಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ. ಈ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸರಸ್ವತಿ ಗುನಗ, ಪ.ಪಂ. ಸದಸ್ಯರಾದ ಸುನಂದ ದಾಸ್, ನರ್ಮದಾ ನಾಯ್ಕ, ಹಲಿಮಾ ಕಕ್ಕೆರಿ ಇದ್ದರು.