ಶಿರಸಿ: ತರಬೇತಿಯಲ್ಲಿ ಪಡೆದ ಎಲ್ಲಾ ಅಂಶಗಳನ್ನು ಮೈಗೂಡಿಸಿಕೊಂಡು ಸ್ವ-ಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ನಡೆಸಿ ಎಂದು ಅರುಣೋದಯ ಸಂಸ್ಥೆಯ ಸಂಸ್ಥಾಪಕರು, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರು ಆದ ಸತೀಶ ಪಿ. ನಾಯ್ಕ ಹೇಳಿದ್ದಾರೆ.
ಅವರು ಅರುಣೋದಯ ತರಬೇತಿ ಕೇಂದ್ರದಲ್ಲಿ ತರಬೇತಿ ಮುಗಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರುಣೋದಯ ಸಂಸ್ಥೆಯ ಅಧ್ಯಕ್ಷ ವಿನಾಯಕ ಶೇಟ್ ಮಾತನಾಡಿ ತರಬೇತಿ ಪಡೆದ ಶಿಬಿರಾರ್ಥಿಗಳು ಮುಂದೆ ಹೊಸ ಉದ್ಯಮ ಪ್ರಾರಂಭಿಸುವುದಾದರೆ ನಿಮಗೆ ನಮ್ಮ ಸಂಸ್ಥೆ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಕೇವಲ ತರಬೇತಿ ಅಷ್ಟೆ ಅಲ್ಲ ನೀವು ಸ್ವಾವಲಂಬಿ ಜೀವನ ನಡೆಸುವ ಪ್ರತಿ ಹಂತದಲ್ಲಿ ಅರುಣೋದಯ ಸಂಸ್ಥೆ ನಿಮ್ಮೊಂದಿಗೆ ಇದೆ ಎಂದರು.
ಈ ಕಾರ್ಯಕ್ರಮದಲ್ಲಿ ಯಲ್ಲಾಪುರ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಉಲ್ಲಾಸ ಶಾನಭಾಗ, ಮುಂಡಗೋಡ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ಹೀರೆಮಠ, ಅರುಣೋದಯ ಸಂಸ್ಥೆಯ ಟ್ರಸ್ಟಿಗಳಾದ ಸುಭಾಷ ಮಂಡೂರ ಮತ್ತು ಚಂದ್ರಕಾಂತ ಪವಾರ ಹಾಗೂ ಸಂಪನ್ಮೂಲ ವ್ಯಕ್ತಿ, ಮಹಿಳಾ ಘಟಕದ ಕಾರ್ಯಕ್ರಮ ಸಂಚಾಲಕರಾದ ಸವಿತಾ ಮಂಡೂರ ಉಪಸ್ಥಿತರಿದ್ದರು. ವಿವಿಧ ತರಬೇತಿಯಲ್ಲಿ ತರಬೇತಿ ಪಡೆದ ಸಮಾರು 40 ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.