ಶಿರಸಿ: ಯಕ್ಷಗಾನ ಕಲಿಕೆಯಿಂದ ಮಕ್ಕಳ ಸಂಸ್ಕಾರ ವೃದ್ಧಿ ಎಂದು ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಹೇಳಿದರು.
ಶಬರ ಸಂಸ್ಥೆ ಸೋಂದಾ, ಉಪೇಂದ್ರ ಪೈ ಪ್ರತಿಷ್ಠಾನ, ಮತ್ತೀಘಟ್ಟದ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮತ್ತೀಘಟ್ಟದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯಕ್ಷಗಾನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನದ ಮೂಲಕ ಭಾಷಾ ಶುದ್ಧಿ ಯಾಗುತ್ತದೆ ಹಾಗೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವುದು ಮೂಲಕ ಸಂಸ್ಕಾರ ಬೆಳೆಯುತ್ತದೆ ಎಂದರು. ಯಕ್ಷಗಾನ ಕಲಾವಿದ ಶ್ರೀನಿವಾಸ ಭಾಗವತ ಮತ್ತೀಘಟ್ಟ, ಯಕ್ಷಗಾನ ಒಂದು ಸಂಪೂರ್ಣ ಕಲೆ ಅದರ ಅಭ್ಯಾಸದಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದರು. ಟಿಎಸ್ಎಸ್ ಅಧ್ಯಕ್ಷ, ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷತೆ ವಹಿಸಿ ಮತ್ತೀಘಟ್ಟ ಸಾಂಸ್ಕೃತಿಕ ಪರಂಪರೆ ಇರುವ ಊರಾಗಿತ್ತು. ಬೇರೆ ಬೇರೆ ಕಾರಣಗಳಿಂದ ಅದಕ್ಕೆ ಮುಸುಕು ಕವಿದಿತ್ತು. ಈಗ ಯಕ್ಷಗಾನ ತರಬೇತಿ ಮೂಲಕ ಮತ್ತೆ ಬೆಳಕಿಗೆ ಬರಲು ದಾರಿಯಾಗಿದೆ ಎಂದರು.
ಎಸ್ ಡಿ ಎಮ್ ಸಿ ಅಧ್ಯಕ್ಷ ಸುಧಾಕರ ನಾಯ್ಕ, ಸ್ಥಳೀಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯದರ್ಶಿ ಹಾಗೂ ಯಕ್ಷಗಾನ ಕಲಾವಿದ ನಾಗಪಂಚಮಿ ಭಟ್ ಶಿಬಿರಕ್ಕೆ ಶುಭ ಕೋರಿದರು.
ಶಬರ ಸಂಸ್ಥೆಯ ಕಾರ್ಯದರ್ಶಿ ಮತ್ತು ಶಿಬಿರದ ನಿರ್ದೇಶಕ ನಾಗರಾಜ್ ಜೋಶಿ ಸೋಂದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಸಂತೋಷ ಮಡಿವಾಳ ಸ್ವಾಗತಿಸಿದರು.ಶಾಲಾಭಿವೃದ್ಧಿ ಸಮಿತಿ ಸದಸ್ಯ ಶ್ರೀಪಾದ ಪಾಟೀಲ್ ನಿರ್ವಹಣೆ ಮಾಡಿದರು. ಶಿಕ್ಷಕ ಹರೀಶ್ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪಾಲಕರು, ಕಲಾಸಕ್ತರು ಭಾಗವಹಿಸಿದ್ದರು.