ಸಿದ್ದಾಪುರ: ವರ್ತಮಾನ ಕಾಲದಲ್ಲಿ ಮಕ್ಕಳಿಗೆ ಯಕ್ಷಗಾನ ಕಲೆಯನ್ನು ಕಲಿಸುವುದರಿಂದ ಮುಂದಿನ ಜನಾಂಗಕ್ಕೂ ಕಲೆಯ ಪ್ರಯೋಜನವನ್ನು ತಿಳಿಸಿದಂತಾಗುತ್ತದೆ. ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಯಲು ಯಕ್ಷಗಾನ ಕಲಿಕೆ ಅನುಕೂಲವಾಗುತ್ತದೆ ಎಂದು ಶ್ರೀಮನ್ನೆಲೆಮಾವು ಮಠದ ಪೀಠಾಧೀಶ್ವರರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಶ್ರೀಮನ್ನೆಲೆಮಾವು ಮಠದ ಪೀಠಾಧೀಶ್ವರರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯ ವ್ರತದ ಅಂಗವಾಗಿ ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀ ಲಕ್ಷ್ಮಿನೃಸಿಂಹ ಸಂಸ್ಕೃತಿ ಸಂಪದ ವೇದಿಕೆಯ ಆಶ್ರಯದಲ್ಲಿ ಪ್ರಾರಂಭಗೊಂಡ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. ಯಕ್ಷಗಾನ ನಾಡಿನ ಶ್ರೇಷ್ಠ ಕಲೆಯಾಗಿದ್ದು ಇದನ್ನು ಕಲಿಯುವುದರಿಂದ ರಾಮಾಯಣ, ಮಹಾಭಾರತ ಮತ್ತು ಮತ್ತಿತರ ಪುರಾಣಗಳ ಮಹತ್ವವನ್ನು ಯಕ್ಷಗಾನದ ಮೂಲಕ ಸಮಾಜಕ್ಕೆ ತಿಳಿಸಬಹುದಾಗಿದೆ. ತರಬೇತಿ ಶಿಬಿರ ನಿರಂತರವಾಗಿ ನಡೆಯುವಂತಾಗಲಿ ಎಂದು ಶ್ರೀಗಳು ನುಡಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಶಿಕ್ಷಕ ಮಹಾಬಲೇಶ್ವರ ಹೆಗಡೆ ಬಿಳೇಕಲ್ ಯಕ್ಷಗಾನ ಪದ್ಯವನ್ನು ಹೇಳುವುದರ ಮೂಲಕ ತರಗತಿ ಆರಂಭಿಸಿದರು. ಜಿ.ಆರ್.ಭಾಗವತ್ ಮದ್ದಳೆ ನುಡಿಸಿದರು.
ಮುರಾರ್ಜಿ ಹೊಸ್ಮನೆ ಉಪಸ್ಥಿತರಿದ್ದರು. ವಿನಾಯಕ ಭಟ್ಟ ನೆಲೆಮಾವು ಕಾರ್ಯಕ್ರಮ ನಿರ್ವಹಿಸಿದರು.