ಕಾರವಾರ: ಅತಿಯಾದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ತಾಲ್ಲೂಕಿನ ಚೆಂಡಿಯಾ ಗ್ರಾಮ ಪಂಚಾಯತಿಯ ಅರಗಾ, ಈಡೂರು, ಪೋಸ್ಟ್ ಚೆಂಡಿಯಾದಲ್ಲಿ ಕಾಳಜಿ ಕೇಂದ್ರದಲ್ಲಿದ್ದ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಹಾಸಿಗೆಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಸಂತೋಷ್ ನಾಯ್ಕ ಹಾಗೂ ಅವರ ಸುಪುತ್ರರಾದ ಪರ್ಬತ್ ನಾಯ್ಕ ವಿತರಿಸಿದರು.
ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ನಾವು ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಕನಸಿನ ಮನೆಗೆ ನೀರು ನುಗ್ಗಿದರೆ ಎಲ್ಲರಿಗೂ ನೋವಾಗುತ್ತದೆ. ಮಳೆಗಾಲದಲ್ಲಿ ಇಂತಹ ಸಮಸ್ಯೆಯನ್ನು ನಮ್ಮ ಜನರು ಅನುಭವಿಸುತ್ತಿದ್ದಾರೆ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಭೇಟಿಯಾಗಿ ಸಮಸ್ಯೆ ಶಾಶ್ವತ ನಿವಾರಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಪ್ರತೀ ವರ್ಷ ನೀರು ತುಂಬಿ ಸಮಸ್ಯೆ ಆಗುತ್ತಿರುವುದರಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಗ್ರಾಮದವರು, ಗ್ರಾಮ ಪಂಚಾಯತಿ ಎಲ್ಲರನ್ನೂ ಒಳಗೊಂಡಿದೆ. ಈ ಮೂಲಕ ಶಾಶ್ವತ ಪರಿಹಾರ ಮಾಡಲಾಗುವುದು.
ವೈಯಕ್ತಿಕವಾಗಿ ನಾನು ಈ ಕಿಟ್ ನೀಡುತ್ತಿದ್ದೇನೆ. ತಾವೆಲ್ಲರೂ ಇದನ್ನು ಸ್ವೀಕರಿಸಬೇಕು ಎಂದು ವಿನಮ್ರ ವಿನಂತಿಸುತ್ತೇನೆ ಎಂದು ರೂಪಾಲಿ ನಾಯ್ಕ್ ಹೇಳಿದರು. ಸರ್ಕಾರ ನೀರು ನುಗ್ಗಿದ ಮನೆಗಳಿಗೆ 5 ಸಾವಿರ ನೀಡುತ್ತಿದ್ದು ಹೆಚ್ಚಿನ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ ಎಂದರು.