ಶಿರಸಿ: ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಳೆದ 36 ವರ್ಷದಿಂದ ಇತಿಹಾಸ ಪ್ರಾಧ್ಯಾಪಕರಾಗಿ, ಒಂದು ವರ್ಷ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ, ಎಂಎಂ ಕಾಲೇಜಿನಲ್ಲಿ ಎರಡುವರೆ ವರ್ಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಟಿ ಎಸ್ ಹಳೆಮನೆ ಹಾಗೂ ಕನ್ನಡ ಪ್ರಾಧ್ಯಾಪಕರಾಗಿ ಕಳೆದ 25 ವರ್ಷದಿಂದ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಆರ್.ಆರ್. ಹೆಗಡೆ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಟಿ.ಎಸ್. ಹಳೆಮನೆ, ಎಂಇಎಸ್ ಸಂಸ್ಥೆ ನನಗೆ ಎಲ್ಲವನ್ನೂ ಕೊಟ್ಟಿದೆ ಅದಕ್ಕೆ ಚಿರರುಣಿ. ಎನ್ಸಿಸಿಯಿಂದ ನಾಯಕತ್ವ ಗುಣ ನನ್ನಲ್ಲಿ ಪರಿಪಕ್ವವಾಯಿತು. ಶಿಕ್ಷಣ ನಿಂತ ನೀರಲ್ಲ ಚಲನಶೀಲವಾದದ್ದು.ಶಿಕ್ಷಕರು ನಿರಂತರ ಕಲಿಕೆಯಲ್ಲಿ ಇದ್ದರೆ ಸಮರ್ಥವಾಗಿ ಸೇವೆ ಸಲ್ಲಿಸಲು ಸಾಧ್ಯ. ನನ್ನ ಕನಸಿನ ಪ್ರಾಚ್ಯ ವಸ್ತು ಸಂಗ್ರಹಾಲಯ ನಿರ್ಮಿಸಲು ಎಲ್ಲರೂ ಸಹಕಾರ ನಿಡಿದ್ದೀರಿ ಧನ್ಯವಾದಗಳು ಎಂದರು.ಇದೇ ಸಂದರ್ಭದಲ್ಲಿ ಕಾಲೇಜಿಗೆ ಒಂದು ಲಕ್ಷ ರೂಪಾಯಿ ದೇಣಿಗೆಯ ಚೆಕ್ ಅಧ್ಯಕ್ಷರಿಗೆ ನೀಡಿದರು.
ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್ ಮಾತನಾಡಿ ಇಂತಹ ಸಭೆ ಸಮಾರಂಭಗಳು ಔಪಚಾರಿಕತೆಗೆ ಸೀಮಿತವಾಗಿ ಇರಬಾರದು. ವಿಚಾರ ವಿನಿಮಯ, ಚರ್ಚೆಗಳೂ ನಡೆದರೆ ಉತ್ತಮ. ನಿವೃತ್ತಿ ಆದ ನಂತರವೂ ನಿಮ್ಮ ಸಹಾಯ ಸಹಕಾರ ನಿರಂತರವಾಗಿ ಇರಲಿ ಎಂದರು.
ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅನುಭವ ಹೊಂದಿದವರ ನಿವೃತ್ತಿ ಸಂಸ್ಥೆಗೆ ತುಂಬಲಾರದ ನಷ್ಟವಾಗುತ್ತದೆ. ಅನುಭವಸ್ಥರಿಂದ ಪಡೆಯುವ ಜ್ಞಾನದಿಂದ ಸಮರ್ಥವಾಗಿ ಎಲ್ಲವನ್ನೂ ಎದುರಿಸಲು ಸಾಧ್ಯ ಎಂದರು.
ಎಂಇಎಸ್ ಉಪಾಧ್ಯಕ್ಷ ಡಾ.ಎಂ.ಜಿ.ಹೆಗಡೆ, ಖಜಾಂಚಿ ಸುಧೀರ್ ಭಟ್, ನೇತ್ರಾವತಿ ಹಳೆಮನೆ, ಎಂಇಎಸ್ ನ ಪದಾಧಿಕಾರಿಗಳು , ಡಾ.ಆರ್.ಆರ್. ಹೆಗಡೆ ಉಪಸ್ಥಿತರಿದ್ದರು.ಪ್ರೊ.ಜಿ.ಟಿ.ಭಟ್ ಸ್ವಾಗತಿಸಿ ವಂದಿಸಿದರು. ಪ್ರೊ. ಕೃಷ್ಣಮೂರ್ತಿ ಭಟ್ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾಗಿ ಕಳೆದ 32 ವರ್ಷಗಳಿಂದ ಸಮಾಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪ್ರಾಧ್ಯಾಪಕ ಜಿ.ಟಿ.ಭಟ್ ಅವರಿಗೆ ಅಧಿಕಾರವನ್ನು ಡಾ. ಟಿ.ಎಸ್.ಹಳೆಮನೆ ಅವರು ಹಸ್ತಾಂತರಿಸಿದರು.