ದಾಂಡೇಲಿ: ನಗರದ ಅಂಬೆವಾಡಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ 6:30 ಗಂಟೆ ಸುಮಾರಿಗೆ ಇಂಡಿಯನ್ ಗ್ಯಾಸ್ ಕಾರ್ಯಾಲಯದ ಮುಂಭಾಗದಲ್ಲಿರುವ ಅರುಣಾದ್ರಿ ರಾವ್ ಅವರ ಮನೆಯ ಬಾಗಿಲ ಮುಂಭಾಗವೇ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ನಡೆದಿದೆ.
ಬೆಳಿಗ್ಗೆ ಎದ್ದು ಅರುಣಾದ್ರಿ ರಾವ್ ಅವರು ಮನೆಯ ಬಾಗಿಲು ತೆರೆಯುತ್ತಿದ್ದಂತೆಯೇ ಮೊಸಳೆ ಪ್ರತ್ಯಕ್ಷವಾಗಿರುವುದನ್ನು ಗಮನಿಸಿದ್ದಾರೆ. ಮೊಸಳೆ ಬಂದಿರುವ ಸುದ್ದಿ ಸುತ್ತಮುತ್ತಲು ಹಬ್ಬಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ತಕ್ಷಣವೇ ಅರುಣಾದ್ರಿ ರಾವ್ ಅವರು ಉರಗ ಪ್ರೇಮಿ ರಜಾಕ್ ಶಾ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ರಜಾಕ್ ಶಾ ಅವರು ಕೂಡಲೇ ತನ್ನ ಸಂಗಡಿಗರನ್ನು ಕಳುಹಿಸಿ ಸ್ಥಳೀಯರ ಸಹಕಾರದಲ್ಲಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಒಟ್ಟಿನಲ್ಲಿ ಸ್ಥಳೀಯ ಜನತೆಯಲ್ಲಿ ಇದೀಗ ಭಯ ನಿರ್ಮಾಣವಾಗಿದ್ದು, ಮೊಸಳೆ ಹೇಗೆ ಬಂತು ಎನ್ನುವುದರ ಬಗ್ಗೆ ಬಿಸಿ ಬಿಸಿ ಚರ್ಚೆಯಾಗತೊಡಗಿದೆ.