ಸಿದ್ದಾಪುರ: ತಾಲೂಕಿನಾದ್ಯಂತ ಅತಿಯಾದ ಮಳೆ ಹಾಗೂ ಬಿರುಸಿನ ಗಾಳಿಯಿಂದಾಗಿ ಹೆಚ್ಚಿನ ಹಾನಿ ಉಂಟಾಗಿದೆ. ಅತಿವೃಷ್ಟಿಯಿಂದ ಕಷ್ಟಕ್ಕೊಳಗಾದ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ದೊರಕಿಸಲು ಶಾಸಕ ಭೀಮಣ್ಣ ನಾಯ್ಕ ಮುಂದಾಗಬೇಕು ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ನಿಂದ ನೀಡಲಾಗುವ ಪರಿಹಾರ ಮಾತ್ರದೊರೆಯುತ್ತಿದೆ.ರಾಜ್ಯ ಸರ್ಕಾರ ನೀಡಬೇಕಾದ ಹೆಚ್ಚುವರಿ ಪರಿಹಾರದೊರಕುತ್ತಿಲ್ಲ. ಶೇ.75ಕ್ಕಿಂತ ಹೆಚ್ಚು, ಶೇ.25ರಿಂದ ಶೇ.75ರಷ್ಟು ಮನೆಹಾನಿಯಾದ ಕುಟುಂಬಗಳಿಗೆ ಎಸ್‌ಡಿಆರ್‌ಎಪ್. ಹಾಗೂ ಎನ್‌ಡಿಆರ್‌ಎಪ್‌ನಿಂದ 1ಲಕ್ಷ 20ಸಾವಿರ ರೂ.ಮಾತ್ರದೊರಕುತ್ತಿದೆ.ರಾಜ್ಯ ಸರ್ಕಾರ ಈ ಹಿಂದೆ ಹೆಚ್ಚುವರಿಯಾಗಿ ನೀಡುತ್ತಿದ್ದ 3ಲಕ್ಷ 80ಸಾವಿರ ರೂ. ದೊರಕುತ್ತಿಲ್ಲ. ಇದು ಸಂತ್ರಸ್ತರಿಗೆ ಆಗುತ್ತಿರುವ ಅನ್ಯಾಯವಾಗಿದೆ.
ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಮನೆಗಳು ಸಂಪೂರ್ಣ ಹಾನಿಯಾಗಿದ್ದು ಅವರಿಗೆ ರಾಜ್ಯ ಸರ್ಕಾರದಿಂದ ದೊರಕಬೇಕಾದ ಪರಿಹಾರ ದೊರಕಬೇಕಾಗಿದೆ. ಹಿಂದಿನ ಬಿಜೆಪಿ ಸರ್ಕಾರರ ರಾಜ್ಯದಿಂದ ಪರಿಹಾರವನ್ನು ನೀಡುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರ ಈ ಹಿಂದಿನ ಸುತ್ತೋಲೆ ಹಿಂಪಡೆದು ಸಂತ್ರಸ್ತರಿಗೆ ಅನ್ಯಾಯ ಮಾಡುತ್ತಿದೆ.ಅಲ್ಲದೇ ಮನೆಗೆ ಅತಿವೃಷ್ಠಿಯಿಂದ ನೀರು ನುಗ್ಗಿದರೆ ಅಂತಹ ಕುಟುಂಬಗಳಿಗೆ 10ಸಾವಿರ ರೂಪಾಯಿಗಳನ್ನು ತತ್ತಕ್ಷಣದಲ್ಲಿ ನೇರವು ನೀಡುತ್ತಿತ್ತು.ಈ ಹಣವನ್ನು ಕೂಡ ನೀಡುತ್ತಿಲ್ಲ. ಈ ಎರಡು ಪರಿಹಾರಗಳು ಸಂತ್ರಸ್ತರಿಗೆ ದೊರಕಿಸಲು ಶಾಸಕ ಭೀಮಣ್ಣ ನಾಯ್ಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಹಾಗೂ ಶಾಸಕರು ಈ ಕೂಡಲೇ ತಾಲೂಕನ್ನು ಅತಿವೃಷ್ಠಿ ಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಡುವಂತೆ ತಿಮ್ಮಪ್ಪ ಎಂ.ಕೆ.ಹೇಳಿಕೆಯಲ್ಲಿ ತಿಳಿಸಿದ್ದಾರೆ.