Slide
Slide
Slide
previous arrow
next arrow

ರೋಟರಿ ಸಂಸ್ಥೆ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ: ಅರುಣ್ ಭಂಡಾರಿ

300x250 AD

ದಾಂಡೇಲಿ : ನಗರದ ಪ್ರತಿಷ್ಟಿತ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ರೋಟರಿ ಕ್ಲಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಜರುಗಿತು.

ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ರೋಟರಿ ಜಿಲ್ಲಾ ಪ್ರಾಂತಪಾಲರಾಗಲಿರುವ ಅರುಣ್.ಡಿ.ಭಂಡಾರಿ ಅವರು, ಜಗತ್ತಿನಲ್ಲೆ ಅತೀ ಹೆಚ್ಚು ಕ್ಲಬ್‌ಗಳನ್ನು ಹೊಂದಿರುವ ಮತ್ತು ಅತೀ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಂಡ ಹೆಗ್ಗಳಿಕೆ ರೋಟರಿ ಸಂಸ್ಥೆಗಿದೆ. ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ಬಲವರ್ಧನೆಯಲ್ಲಿ ರೋಟರಿ ಪಾತ್ರ ಬಹುಮುಖ್ಯವಾಗಿದೆ. ವಿಶಿಷ್ಟ ಕಲ್ಪನೆ ಮತ್ತು ವಿಶಿಷ್ಟ ದೂರದೃಷ್ಟಿಯನ್ನಿಟ್ಟುಕೊಂಡು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ರೋಟರಿ ಸಂಸ್ಥೆ ತನ್ನ ಕಾರ‍್ಯಚಟುವಟಿಕೆಗಳ ಮೂಲಕವೇ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ದಾಂಡೇಲಿಯ ರೋಟರಿ ಕ್ಲಬ್ ಈ ಭಾಗದ ಅಭಿವೃದ್ಧಿಗಾಗಿ ಬದ್ಧತೆಯಿಂದ ಕಾರ‍್ಯನಿರ್ವಹಿಸುತ್ತ ಬಂದಿರುವುದು ಅಭಿಮಾನದ ವಿಚಾರ ಎಂದರಲ್ಲದೇ, ನಿರ್ಗಮಿತ ಪದಾಧಿಕಾರಿಗಳು ಅತ್ಯುತ್ತಮವಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ನೂತನ ಪದಾಧಿಕಾರಿಗಳು ಹೆಚ್ಚು ಹೆಚ್ಚು ಸದಸ್ಯರನ್ನು ಕ್ಲಬಿಗೆ ಸೇರ್ಪಡೆಗೊಳಿಸಿ ರೋಟರಿ ಕ್ಲಬನ್ನು ಮತ್ತಷ್ಟು ಬಲವರ್ಧನೆಯ ಜೊತೆಗೆ ಸಾಮಾಜಿಕ ನೆರವನ್ನು ನೀಡಲು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಲೆಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರೋಟರಿ ಸಹಾಯಕ ಪ್ರಾಂತಪಾಲರಾದ ಆನಂದ ತಾವರಗೆರೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ರೋಟರಿ ಕ್ಲಬ್ ಪರಿಣಾಮಕಾರಿಯಾದ ವೇದಿಕೆ ಎಂದರು.

ನಿರ್ಗಮಿತ ಅಧ್ಯಕ್ಷರಾದ ಜೋಸೆಫ್ ಗೋನ್ಸಾಲಿಸ್ ಮಾತನಾಡಿ ನಮ್ಮ ಅವಧಿಯಲ್ಲಿ ರೋಟರಿ ಕ್ಲಬಿನ ಎಲ್ಲ ಕಾರ‍್ಯಚಟುವಟಿಕೆಗಳಿಗೆ ತುಂಬು ಹೃದಯದ ಸಹಕಾರ ನೀಡಿದ ರೋಟರಿ ಕ್ಲಬಿನ ಸರ್ವ ಸದಸ್ಯರುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ನಾಗರೀಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು.

300x250 AD

ನೂತನ ಅಧ್ಯಕ್ಷರಾದ ರಾಹುಲ್ ಬಾವಾಜಿ ಮಾತನಾಡಿ ವಿಶ್ವಮಾನ್ಯತೆಯನ್ನು ಹೊಂದಿರುವ ರೋಟರಿ ಕ್ಲಬನ್ನು ಮುನ್ನಡೆಸಲು ಅವಕಾಶ ದೊರೆತಿರುವುದು ನನ್ನ ಪುಣ್ಯ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರೋಟರಿ ಕ್ಲಬಿನ ಘನತೆ, ಗೌರವವನ್ನು ಇಮ್ಮಡಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದರು.

ವೇದಿಕೆಯಲ್ಲಿ ರೋಟರಿ ಕ್ಲಬಿನ ನೂತನ ಕಾರ‍್ಯದರ್ಶಿ ಅಶುತೋಷ್ ಕುಮಾರ್ ರಾಯ್, ಖಜಾಂಚಿ ಲಿಯೋ ಪಿಂಟೋ, ರೋಟರಿ ಸೇವಾ ನಿರ್ದೇಶಕರಾದ ಸುಧಾಕರ ಶೆಟ್ಟಿ, ದೀಪಕ್ ಭಂಡಗಿ ಮೊದಲಾದವರು ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ನೂತನ ಸದಸ್ಯರುಗಳನ್ನು ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು.

ಜೋಸೆಫ್ ಗೋನ್ಸಾಲಿಸ್ ಸ್ವಾಗತಿಸಿದ ಕಾರ‍್ಯಕ್ರಮದಲ್ಲಿ ಅತಿಥಿಗಳನ್ನು ಹಾಗೂ ನೂತನ ಪದಾಧಿಕಾರಿಗಳನ್ನು ಎಸ್.ಜಿ.ಬಿರಾದಾರ, ರಾಜೇಶ್ ತಿವಾರಿ, ಎಸ್ ಪ್ರಕಾಶ ಶೆಟ್ಟಿ, ಸುಧಾಕರ ಶೆಟ್ಟಿ ಮತ್ತು ಆರ್.ಪಿ.ನಾಯ್ಕ ಅವರು ಪರಿಚಯಿಸಿದರು. ನೂತನ ಕಾರ‍್ಯದರ್ಶಿ ಅಶುತೋಷ್ ಕುಮಾರ್ ರಾಯ್ ವಂದಿಸಿದರು. ಡಾ.ಎಚ್.ವೈ.ಮೆರ್ವಾಡೆ ಮತ್ತು ಎಸ್.ಸೋಮಕುಮಾರ್ ಕಾರ‍್ಯಕ್ರಮವನ್ನು ನಿರೂಪಿಸಿದರು. ಕಾರ‍್ಯಕ್ರಮದಲ್ಲಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ರೋಟರಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯ ನಾಗರಿಕರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top