ಅಂಕೋಲಾ: ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತದಲ್ಲಿ ಸಿಲುಕಿರುವವನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ವತಿಯಿಂದ ನಿರಂತರವಾಗಿ ವ್ಯಾಪಕ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಅವರು ಶನಿವಾರ ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡಕುಸಿತ ಪ್ರದೇಶಕ್ಕೆ ಭೇಟಿ ನೀಡಿ, ಗುಡ್ಡ ಕುಸಿತದಿಂದ ಬಿದ್ದಿರುವ ಮಣ್ಣು ತೆರವು ಪರಿಶೀಲನಾ ಕಾರ್ಯಾಚರಣೆ ವೀಕ್ಷಿಸಿ ಮಾತನಾಡಿದರು.
ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವವರನ್ನು ಹುಡುಕಲು ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ನಿರಂತರವಾಗಿ ಗುಡ್ಡದಿಂದ ಜಾರಿರುವ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ ಸುರತ್ಕಲ್‌ನ ಎನ್.ಐ.ಟಿ.ಕೆ ಯಿಂದ ಆಗಮಿಸಿರುವ ತಜ್ಞರ ತಂಡ ರಾಡಾರ್ ಮೂಲಕ ಪತ್ತೆ ಕಾರ್ಯಚರಣೆ ಕೈಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ಇಲಾಖೆವತಿಯಿಂದ ಸಮೀಪದ ನದಿಯಲ್ಲಿಯೂ ಪತ್ತೆ ಕಾರ್ಯ ನಡೆಯುತ್ತಿದೆ. ಹೆಲಿಕ್ಯಾಪ್ಟರ್ ಮೂಲಕ ಕಾರ್ಯಾಚರಣೆ ಮಾಡಲು ಜಿಲ್ಲಾಡಳಿತ ಈಗಾಗಲೇ ಕ್ರಮ ಕೈಗೊಂಡಿದ್ದು ಹವಾಮಾನ ವೈಪರಿತ್ಯದ ಕಾರಣದಿಂದ ವಿಳಂಬವಾಗಿದ್ದು ಆದರೂ ಸಹ ಜಿಲ್ಲಾಡಳಿದ ಮೂಲಕ ಸರ್ವ ರೀತಿಯಲ್ಲೂ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಗುಡ್ಡ ಕುಸಿತ ಪ್ರದೇಶದ ಮೇಲ್ಭಾಗಕ್ಕೆ ಕ್ರೇನ್ ಮೂಲಕ ತೆರಳಿದ ಸಚಿವರು ಮತ್ತು ಶಾಸಕ ಸತೀಶ್ ಸೈಲ್ ರಕ್ಷಣಾ ಕಾರ್ಯಚರಣೆಯನ್ನು ವೀಕ್ಷಿಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಭಟ್ಕಳ ಉಪ ವಿಭಾಗಾಧಿಕಾರಿ ಡಾ. ನಯನ ಮತ್ತು ವಿವಿಧ ಅಧಿಕಾರಿಗಳು ಇದ್ದರು..