ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೊಳಗಾದ ಬನವಾಸಿ ದೇವಾಲಯ
ಐತಿಹಾಸಿಕ ದೇವಸ್ಥಾನಕ್ಕೆ ಪ್ಲಾಸ್ಟಿಕ್ ಹೊದಿಕೆ ಔಚಿತ್ಯವಲ್ಲ: ಸಾರ್ವಜನಿಕರ ಆಕ್ರೋಶ
ಸುಧೀರ ನಾಯರ್
ಬನವಾಸಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ವಿಪರೀತ ಮಳೆಗೆ ಇಲ್ಲಿನ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನದ ಒಳಾಂಗಣ ಸಂಪೂರ್ಣವಾಗಿ ಸೋರುತ್ತಿದೆ. ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬನವಾಸಿಯ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ನಿರಂತರ ಮಳೆಯಿಂದಾಗಿ ಭಕ್ತರು ದೇವಸ್ಥಾನದ ಒಳಭಾಗದಲ್ಲಿ ಛತ್ರಿ, ರೈನ್ ಕೋಟ್ ಹಾಕಿಕೊಂಡು ದರ್ಶನ ಮಾಡುವ ಪರಿಸ್ಥಿತಿ ಎದುರಾಗಿದೆ. ಮಧುಕೇಶ್ವರ ದೇವಸ್ಥಾನದ ಗರ್ಭಗುಡಿ, ಸಂಕಲ್ಪ ಮಂದಿರ ಮಾತ್ರವಲ್ಲದೇ ಅಕ್ಕಪಕ್ಕದಲ್ಲಿರುವ ದೇವಸ್ಥಾನಗಳು ಅಲ್ಲಲ್ಲಿ ಸೋರುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ಮಳೆಗಾಲದಲ್ಲಿ ಸೋರುವ ಸಮಸ್ಯೆ ಇದ್ದರೂ ಪುರಾತತ್ವ ಇಲಾಖೆ ದುರಸ್ತಿ ಮಾಡದೇ ಪ್ಲಾಸ್ಟಿಕ್ ಹೊದಿಕೆ ಹಾಕಿರುವುದಕ್ಕೆ ಸ್ಥಳೀಯ ಸಾರ್ವಜನಿಕರು, ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪುರಾತನ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ನೆಲಹಾಸು ಕಲ್ಲಿನಿಂದ ನಿರ್ಮಾಣವಾಗಿದ್ದು ಮಳೆ ನೀರು ಬಿದ್ದು ಭಕ್ತರು ಜಾರಿ ಬೀಳುವ ಸಂಭವವಿದೆ. ಇಂತಹ ಅನಾಹುತ ನಡೆದರೆ ಇದಕ್ಕೆ ಪುರಾತತ್ವ ಇಲಾಖೆ ನೇರ ಹೊಣೆಯಾಗಲಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ದೇವಸ್ಥಾನ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಟ್ಟಿದ್ದು ಪೂಜಾ ಕಾರ್ಯಕ್ಕೆ ಆಡಳಿತ ಮಂಡಳಿಯಿದೆ. ಆಡಳಿತ ಮಂಡಳಿಯವರು ದುರಸ್ತಿ ಕಾರ್ಯಕ್ಕೆ ಕೈಹಾಕುವಂತಿಲ್ಲ. ಕಳೆದ ವರ್ಷವೂ ಕೂಡಾ ಪ್ರತಿಷ್ಠಿತ ದಿನಪತ್ರಿಕೆ ಈ ಕುರಿತು ಬೆಳಕು ಚೆಲ್ಲಿತ್ತು. ಬಳಿಕ ಎಚ್ಚೆತ್ತ ಪುರಾತತ್ವ ಇಲಾಖೆಯ ಅಧಿಕಾರಿಗಳು ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿ ಬೇಸಿಗೆಯಲ್ಲಿ ದುರಸ್ತಿ ಮಾಡುವ ಭರವಸೆ ನೀಡಿದರು. ದುರಸ್ತಿ ಕೇವಲ ಭರವಸೆಯಾಗಿಯೇ ಉಳಿದುಕೊಂಡಿರುವುದು ಬೇಸರದ ಸಂಗತಿ.
ಕದಂಬೋತ್ಸವ ಸಂದರ್ಭದಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ್ ಮಧುಕೇಶ್ವರ ದೇವಸ್ಥಾನದ ದುರಸ್ತಿಗಾಗಿ 50ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಹೇಳಿದ್ದರು ಅದರೆ ಈವರೆಗೆ ಯಾವುದೇ ದುರಸ್ತಿ ಕಾರ್ಯ ಕೈಗೊಳ್ಳದೇ ಇರುವುದಕ್ಕೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಾರಣವಾಗಿದೆ.
ಕನ್ನಡದ ಪ್ರಥಮ ರಾಜಧಾನಿಯಾದ ಬನವಾಸಿಗೆ ಇಂತಹ ಶೋಚನೀಯ ಪರಿಸ್ಥಿತಿ ಎದುರಾಗಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ. ಪುರಾತತ್ವ ಇಲಾಖೆಯು ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎನ್ನುವುದು ಸಾರ್ವಜನಿಕರ, ಪ್ರವಾಸಿಗರ ಆಗ್ರಹವಾಗಿದೆ.
ಮೂರು ವರ್ಷಗಳಿಂದ ಪುರಾತತ್ವ ಇಲಾಖೆಯ ಗಮನಕ್ಕೆ ತರುತ್ತಿದ್ದೇವೆ. ಆದರೆ ಪುರಾತತ್ವ ಇಲಾಖೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ದೇವಸ್ಥಾನ ಸೋರುವಿಕೆಯಿಂದ ಭಕ್ತರಿಗೆ ತುಂಬಾ ತೊಂದರೆಯಾಗುತ್ತಿದೆ. ಐತಿಹಾಸಿಕ ಹಿನ್ನೆಲೆಯ ದೇವಸ್ಥಾನಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿರುವುದು ಸರಿಯಲ್ಲ. ಈ ಬೇಸಿಗೆಯಲ್ಲಿ ದುರಸ್ತಿ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ.–
ಉದಯಕುಮಾರ್ ಕಾನಳ್ಳಿ, ಅಧ್ಯಕ್ಷರು, ಬನವಾಸಿ ತಾಲ್ಲೂಕು ಹೋರಾಟ ಸಮಿತಿ
ನಾವು ಬಹಳ ದೂರದಿಂದ ಬನವಾಸಿ ದೇವಸ್ಥಾನ ವೀಕ್ಷಣೆಗೆಂದು ಭೇಟಿ ನೀಡಿದ್ದೇವೆ. ಮಳೆಯಿಂದಾಗಿ ದೇವಸ್ಥಾನ ಸಂಪೂರ್ಣವಾಗಿ ಸೋರುತ್ತಿದೆ. ನೆಲವು ತುಂಬಾ ಜಾರುತ್ತಿದೆ ಮಕ್ಕಳು, ವೃದ್ಧರು ನಡೆದಾಡುವುದು ಕಷ್ಟಕರ. ಪುರಾತತ್ವ ಇಲಾಖೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.–ಸುಭಾಸ್ ಪೂಜೇರಿ, ಪ್ರವಾಸಿಗರು
ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಾಗುತ್ತಿದೆ. ಯಾರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಐತಿಹಾಸಿಕ ಬನವಾಸಿಯು ಕೇವಲ ಪುಸ್ತಕಗಳಲ್ಲಿ ಮಾತ್ರ ಸಮೃದ್ಧಿಯಾಗಿದೆ. ಅದರೆ ಅಭಿವೃದ್ಧಿ ಮಾತ್ರ ಶೂನ್ಯ.–ಶಾಂತಲಾ ಕಾನಳ್ಳಿ, ಬನವಾಸಿ