ಯಲ್ಲಾಪುರ: ಅರಬೈಲ್ ಘಟ್ಟದ ಅಂಚಿನ ಪ್ರದೇಶವಾದ ಡಬ್ಗುಳಿಯಲ್ಲಿ ಸತತ 5ನೇ ವರ್ಷವೂ ಗುಡ್ಡ ಕುಸಿದಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಈ ಅವಾಂತರಕ್ಕೆ ಕಾರಣ ಎಂಬುದು ಜನರ ದೂರು.
ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ರಸ್ತೆಯ ಮೇಲೆ ಮಣ್ಣು ಬಿದ್ದಿದ್ದರಿಂದ ಸಂಚಾರ ಹದಗೆಟ್ಟಿತ್ತು. ಹೀಗೆ ಹಿಂದಿನ ನಾಲ್ಕು ವರ್ಷಗಳಿಂದ ಗುಡ್ಡ ಕುಸಿಯುತ್ತಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ. ಇದೀಗ ಐದನೇ ವರ್ಷ ಮತ್ತೆ ರಸ್ತೆಯ ಮೇಲೆ ಗುಡ್ಡ ಕುಸಿಯುತ್ತಿದೆ. ಗುರುವಾರ ರಾತ್ರಿ ಅಲ್ಪ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು, ಹಂತ ಹಂತವಾಗಿ ಗುಡ್ಡ ಜಾರುತ್ತಿದೆ.
ಪ್ರಸ್ತುತ ರಸ್ತೆಯ ಮೇಲೆ 4 ಅಡಿ ಮಣ್ಣು ಬಿದ್ದಿದೆ. ಕಾರು-ಜೀಪ್ ಓಡಾಡುವ ಹಾಗಿಲ್ಲ. `ಕಳೆದ ವರ್ಷ 7 ಕೋಟಿ ರೂ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿರುವುದಾಗಿ ಜನಪ್ರತಿನಿಧಿಗಳು ಹೇಳಿದ್ದು, ಆ ಕೆಲಸ ಏನಾಯಿತು? ಎಂಬುದು ಗೊತ್ತಿಲ್ಲ. ಈ ಬಾರಿ ಮತ್ತೆ ಕುಸಿತದಿಂದ ಊರಿನ ಜನ ತೊಂದರೆಯಲ್ಲಿದ್ದಾರೆ’ ಎಂದು ಸ್ಥಳೀಯ ರಾಘವೇಂದ್ರ ಹೆಗಡೆ ಆತಂಕ ವ್ಯಕ್ತಪಡಿಸಿದರು. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.