“ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ | ಪರರ್ದ್ಧಿಃ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷೇಣಃ” ||
ಭಾವಾರ್ಥ:
ಇವನ ನಿಜಸ್ವರೂಪವು ಕೇವಲ ಶುದ್ಧವಾದ ಪ್ರಜ್ಞೆಯ ಸ್ವರೂಪವಾಗಿದೆ.ಆತ್ಮಜ್ಞಾನಕ್ಕಾಗಿ ಸತತವಾಗಿ ಪ್ರಯತ್ನ ಮಾಡುವಿಕೆಯು ಇಂದ್ರಿಯಗಳ ಸಂಯಮವನ್ನು ಅಪೇಕ್ಷಿಸುತ್ತದೆ. ಮತ್ತು ಅನಾತ್ಮದೊಂದಿಗೆ ತಾದಾತ್ಮ್ಯವನ್ನುಬಿಟ್ಟು ಆತ್ಮನೊಂದಿಗೆ ತಾದಾತ್ಮ್ಯ ವನ್ನು ಬೆಳೆಸಿಕೊಳ್ಳಬೇಕು. ಈ ಕ್ರಿಯೆಗೆ ‘ವ್ಯವಸಾಯ’ ಎಂದು ಹೆಸರು. ಈ ಮೂಲಕ ಪರಮಾತ್ಮನು ದೊರಕುವುದರಿಂದ ಅವನಿಗೆ ಈ ಹೆಸರು.ಈತನಲ್ಲಿ ಎಲ್ಲವೂ ಎಂದರೆ ಪ್ರಪಂಚದ ನಿಯಮಗಳನ್ನು, ಆಶ್ರಮಗಳನ್ನು ಧರ್ಮಗಳನ್ನು ವ್ಯವಸ್ಥಿತವಾಗಿ ಇದ್ದುಕೊಂಡಿದೆಯಾದ್ದರಿಂದ ‘ವ್ಯವಸ್ಥಾನನು’. ಭೂತಗಳ ಸಂಸ್ಥಿತಿ ಎಂದರೆ ಪ್ರಳಯ ರೂಪವಾದ ಇರುವಿಕೆಯು ಆಗುವದರಿಂದ ‘ಸಂಸ್ಥಾನನು’. ಜೀವ ಜಂತುಗಳಿಗೆ ಅವರವರ ಕರ್ಮಫಲಕ್ಕೆ ಅಥವಾ ವಾಸನೆಗಳಿಗೆ ಅನುಗುಣವಾಗಿ ಸ್ಥಾನವನ್ನು ಅಂದರೆ ಮುಂದಿನ ಜನ್ಮಸ್ಥಳವನ್ನು ಹಾಗೂ ಶರೀರವನ್ನು ಕೊಡುವವವನು ಆದ್ದರಿಂದ ‘ಸ್ಥಾನದಃ’. ಯಾವುದೇ ರೀತಿಯ ವಿಕಾರಗಳಿಲ್ಲದೆ ಶಾಶ್ವತವಾಗಿರುವವನು. ಇವನನ್ನು ಬೆಳಗುವ ಶುದ್ಧ ಪ್ರಜ್ಞೆಯು ಬದಲಾಗದೇ ಹಾಗೆ ಇರುತ್ತದೆ. ಆದ್ದರಿಂದ ಇವನು ‘ಧ್ರುವನು’. ‘ಪರ’ ಎಂದರೆ ಉತ್ಕೃಷ್ಟವಾದ ವಿಭೂತಿಯು ಈತನಿಗೆ ಇದೆ ಯಾಗಿದ್ದರಿಂದ ‘ಪರರ್ದ್ಧಿಃ’ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಳ್ಳುವವವನು.ಎಲ್ಲರಲ್ಲಿಯೂ ಇರುವ “ನಾನು” ಎಂಬ ಜೀವಭಾವವು ವಾಸ್ತವಿಕವಾಗಿ ಪರಮಾತ್ಮನೇ ಆಗಿದ್ದಾನೆ.ಇಷ್ಟು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿರುವದರಿಂದ ಅವನಿಗೆ “ಪರಮ ಸ್ಪಷ್ಟಃ” ಎನ್ನುವ ಈ ಹೆಸರು. ಸರ್ವದಾ ಸಂತುಷ್ಟನು.ಆದ್ದರಿಂದ ‘ತುಷ್ಟನು’. ಎಲ್ಲಾ ಕಡೆಯಲ್ಲಿಯೂ ಇವನೇ ಇರುವದರಿಂದ ‘ಪುಷ್ಟನು’. ಇವನು ಶುಭ ಪ್ರದವಾದ ನೋಟವುಳ್ಳವನು. ಆದ್ದರಿಂದ ‘ಶುಭೇಕ್ಷಣನು’. ಭಗವಂತನ ಒಂದು ಕಡೆಗಣ್ಣಿನ ನೋಟವೂ ಮುಮುಕ್ಷುಗಳಿಗೆ ಮೋಕ್ಷವನ್ನು ಕೊಡುವಂತಹುದು. ಇಷ್ಟಾರ್ಥಗಳನ್ನು ಬಯಸುವವರಿಗೆ ಅವನ್ನು ನೀಡುವಂತಹದು.ಸರ್ವ ಸಂದೇಹಗಳನ್ನು ನಿವಾರಿಸುವಂತಹದು. ಪಾಪಿಗಳ ಪಾಪವನ್ನು ತೊಳೆದು ಅವರನ್ನು ಪವಿತ್ರರನ್ನಾಗಿ ಮಾಡುವಂತಹದು.
ಈ ಶ್ಲೋಕದ ವೈಶಿಷ್ಟ್ಯ:
ಪುಬ್ಬಾ(ಹುಬ್ಬಾ) ನಕ್ಷತ್ರದ ೨ ನೇ ಪಾದದಲ್ಲಿ ಜನಿಸುವವವರು ಪ್ರತಿ ನಿತ್ಯ ೧೧ ಬಾರಿ ಹೇಳಿಕೊಳ್ಳಬೇಕಾದ ಸ್ತೋತ್ರ. ನಾವು ಯಾವದೇ ವೃತ್ತಿಯಲ್ಲಿ, ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದು, ಕಾಯಾ ವಾಚಾ ಮನಸಾ ಶ್ರದ್ಧೆಯಿಂದ ಕೆಲಸಮಾಡುತ್ತಿದ್ದರೂ, ಸಂಬಂಧ ಪಟ್ಟ ಸಂಸ್ಥೆಯಿಂದ, ಸರ್ಕಾರದಿಂದ ಅಥವಾ ಮಾಲೀಕರಿಂದ, ಮೇಲಾಧಿಕಾರಿಗಳಿಂದ, ದೊರಕಬೇಕಾದಷ್ಟು ಮನ್ನಣೆ, ಪ್ರಶಂಸೆ, ಮುಂಭಡ್ತಿ, ಇನ್ನೂ ದೊರಕದಿದ್ದರೆ ಸರ್ವರೂ (ಯಾವುದೇ ನಕ್ಷತ್ರದಲ್ಲಿ ಹುಟ್ಟಿದ್ದರೂ ) ಈ ಸ್ತೋತ್ರ ಹೇಳಿಕೊಳ್ಳಬೇಕು. ನಮ್ಮ ಸಾಮರ್ಥ್ಯ ಹಾಗೂ ಯಶಸ್ಸಿನ ಸಾಧ್ಯತೆಗಳು ಬಹಳಷ್ಟಿದ್ದು ಇನ್ನೂ ಚಿಕ್ಕಪುಟ್ಟ ಉದ್ಯಮ, ವೃತ್ತಿಯಲ್ಲಿ ಮೇಲೇರಬೇಕಾದರೆ, ಕೃಷಿ,ವ್ಯವಸಾಯ, ಹೈನುಗಾರಿಕೆ,ರೇಷ್ಮೆ, ಮುಂತಾದ ಪರಂಪರಾಗತ ಜೀವನಾಧಾರ ಕಸಬನ್ನು ಮಾಡುತ್ತಿರುವವರು, ಅದರಲ್ಲಿ ಅದ್ಭುತ ಯಶಸ್ಸುಗಳಿಸಬೇಕಾದರೆ ಈ ಸ್ತೋತ್ರ ಹೇಳಿಕೊಳ್ಳಬೇಕು.ವೈದ್ಯವೃತ್ತಿ. ವಕೀಲವೃತ್ತಿ ಮುಂತಾದ ಎಲ್ಲ ವೃತ್ತಿಗಳಲ್ಲಿ ಕೆಲಸ ಮಾಡುವವವವರು ಯಶಸ್ವಿಗಳಾಗಲು,ಔದ್ಯಮಿಕ ಸಮಾಜದಲ್ಲಿ ನಮ್ಮ ಸ್ಥಾನ ಗಟ್ಟಿಯಾಗಲು ಈ ಸ್ತೋತ್ರವನ್ನು ಹೇಳಿಕೊಳ್ಳಬೇಕು.
(ಸಂ:-ಡಾ.ಚಂದ್ರಶೇಖರ.ಎಲ್.ಭಟ್.ಬಳ್ಳಾರಿ)