ಶಿರಸಿ: ಹೆಚ್ಚು ಕಡಿಮೆ 90 ವರ್ಷವನ್ನು ಪೂರೈಸುತ್ತಿರುವಂತಹ ಮೋಹನ್ ಹೆಗಡೆ ಕಬ್ಬೆ ಸಾರ್ವಜನಿಕ ಬದುಕಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ರೈತರ ಹಾಗೂ ಜನತೆಯ ಬದುಕಿನಲ್ಲಿ ಹಸನ್ಮುಖಿಯಾಗಿ ಈಗಲೂ ಕೆಲಸ ಮಾಡುತ್ತಲಿದ್ದಾರೆ. ಕಾರಣ ರಾಜ್ಯ ಸರ್ಕಾರವು ಕೊಡುವಂತಹ ಸಹಕಾರಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೊಡಲ್ಪಡುವ ಪುರಸ್ಕಾರವನ್ನು ಮುಖ್ಯಮಂತ್ರಿಗಳು ವಿಶೇಷವಾಗಿ ಅವರನ್ನು ಗೌರವಿಸಬೇಕೆಂದು ಸಾಮಾಜಿಕ ಕಾರ್ಯಕರ್ತ, ಮೋಹನ ಹೆಗಡೆಯವರ ಅಭಿಮಾನಿ ಉಮೇಶ ಆರ್. ನಾಯ್ಕ ಕಲ್ಲಿ ಸರ್ಕಾರವನ್ನು ಒತ್ತಾಯಿಸುವ ಮೂಲಕ ಆಗ್ರಹಿಸಿದ್ದಾರೆ.
ಮೋಹನ ವಿ. ಹೆಗಡೆ ಕಬ್ಬೆ ಹುಟ್ಟಿ ಬೆಳೆದದ್ದು ಕುಮಟಾದ ಹೆಗಡೆ ಗ್ರಾಮದಲ್ಲಿ. ಆದರೆ ತಮ್ಮ ಜೀವನದ ಪ್ರಯಾಣವು ಶಿರಸಿ ತಾಲೂಕಿನ ಕಬ್ಬೆ ಗ್ರಾಮದಲ್ಲಿ. ಮೋಹನ ಹೆಗಡೆ ಕಬ್ಬೆ ತಮ್ಮ ಶಾಲಾ ದಿನಗಳ ನಂತರ ಶ್ರಮಿಕರಾಗಿ ಕಬ್ಬೆ ಸುತ್ತಮುತ್ತ ಗ್ರಾಮಗಳಿಂದ ಹಾಲನ್ನು ಶೇಖರಣೆ ಮಾಡುವ ಮೂಲಕ ನಗರಕ್ಕೆ ಬಂದು ಮಾರುತ್ತಿದ್ದರು. ಹಾಗೆಯೇ ಶಿರಸಿಯ ನಗರದಲ್ಲಿ ಸೈಕಲ್ ಅಂಗಡಿಯನ್ನು ಇಡುವ ಮೂಲಕ ತಮ್ಮ ದಿನನಿತ್ಯದ ಬದುಕನ್ನು ನಡೆಸುತ್ತಾ ಬಂದಿದ್ದಾರೆ. ಹೀಗೆಯೇ ತಮ್ಮ ಸಾರ್ವಜನಿಕ ಬದುಕಿನಲ್ಲಿ ವಿಶೇಷವಾಗಿ ಸಹಕಾರಿ ಕ್ಷೇತ್ರ, ರಾಜಕೀಯ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಹಕಾರಿ ಕ್ಷೇತ್ರವಾಗಿ ಉಂಚಳ್ಳಿ ಸಹಕಾರಿ ಸೇವಾ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ ವಿಘ್ನರಾಜ ಕೋ-ಆಪರೇಟಿವ್ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷರಾಗಿ ಈಗಲೂ ತಮ್ಮ ಸೇವೆಯನ್ನು ಮಾಡುತ್ತಲಿದ್ದಾರೆ. ಶಿರಸಿ ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾಗಿ, ಶಿರಸಿ ಎ.ಪಿ.ಎಂ.ಸಿ. ಯ ಅಧ್ಯಕ್ಷರಾಗಿ, ತಾಲೂಕಿನ ಹಾಗೂ ಸ್ಥಳಿಯಮಟ್ಟದ ಅನೇಕ ಸಂಸ್ಥೆಗಳ ಅಧ್ಯಕ್ಷರಾಗಿ ಜನರಿಗೆ ಉಪಕಾರವನ್ನು ಮಾಡಿದ್ದಾರೆ ಹಾಗೆಯೇ ರಾಜಕೀಯವಾಗಿ ಪಂಚಾಯತ ಅಧ್ಯಕ್ಷರಾಗಿ ಮಂಡಳದ ಪ್ರಧಾನರಾಗಿ ತಮ್ಮ ಪಕ್ಷದ ಅನೇಕ ಜವಾಬ್ದಾರಿಯನ್ನು ಪೂರೈಸಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಇತ್ತೀಚಿನ ಅನೇಕ ವರ್ಷಗಳಿಂದ ವಾರ್ಷಿಕವಾಗಿ ಜನತೆಯ ಬದುಕಿಗೋಸ್ಕರ ಧಾರ್ಮಿಕ ಕಾರ್ಯಕ್ರಮಗಳನ್ನು ಈಗಲೂ ಮಾಡುತ್ತಲಿದ್ದಾರೆ.
ಒಟ್ಟಾರೆಯಾಗಿ ತಮ್ಮ ಜೀವನದುದ್ದಕ್ಕೂ ಇವತ್ತಿನ ತನಕವೂ ಸಾರ್ವಜನಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಉತ್ಸುಕತೆಯಿಂದ, ಸಹನೆ ತಾಳ್ಮೆಯಿಂದ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಹಾಗೇಯೆ ಜಿಲ್ಲಾ ಸಹಕಾರಿ ಯೂನಿಯನ್‌ನ ಸಂಘಟನೆಯ ಉಪಾಧ್ಯಕ್ಷರಾಗಿ ಜಿಲ್ಲಾ ಮಟ್ಟದಲ್ಲಿಯೂ ಅನೇಕ ಸಹಕಾರಿ ಕ್ಷೇತ್ರದ ಸಂಘಟನೆಯಲ್ಲಿ ತಮ್ಮ ಸೇವೆಯನ್ನು ಪೂರೈಸಿದ್ದಾರೆ. ಜಿಲ್ಲೆಯ ಎಲ್ಲ ಜನನಾಯಕರಿಗೂ ಚಿರಪರಿಚಿತರಾಗಿದ್ದು, ಶಾಸಕರುಗಳು ಹಾಗೂ ಉಸ್ತುವಾರಿ ಸಚಿವರುಗಳು ಸರ್ಕಾರ ಮಟ್ಟದಲ್ಲಿ ಪುರಸ್ಕರಿಸಲಿಕ್ಕೆ ಪ್ರಯತ್ನ ಮಾಡಬೇಕೆಂದು ತಮ್ಮಲ್ಲಿ ಒತ್ತಾಯ ಮಾಡಲಾಗುವುದೆಂದು ಉಮೇಶ ನಾಯ್ಕ ಕಲ್ಲಿ ಹೇಳಿದ್ದಾರೆ.
ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಹಾಗೂ ಸಹಕಾರ ಮಂತ್ರಿಗಳಲ್ಲಿಯೂ ಮೋಹನ ಹೆಗಡೆ ಕಬ್ಬೆಯವರನ್ನು ಗೌರವಿಸಿ ಪುರಸ್ಕರಿಸಬೇಕೆಂದು ಒತ್ತಾಯ ಮಾಡುವ ಮೂಲಕ ಆಗ್ರಹಿಸಲಾಗುವುದು ಎಂದು ಉಮೇಶ ನಾಯ್ಕ ಕಲ್ಲಿ ಹೇಳಿದ್ದಾರೆ.