ಪಶ್ಚಿಮ ಬಂಗಾಳದಲ್ಲಿ ನಡೆದ ಹೇಯಕೃತ್ಯ ಖಂಡಿಸಿ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ
ಶಿರಸಿ: ಪಶ್ಚಿಮ ಬಂಗಾಳದ ಕೂಚ್ ದೆಹಾರ್ ಮತ್ತು ಉತ್ತರ ದಿವಾಳ್‌ಪುರ್ (ಚೋಪ್ರಾ)ದಲ್ಲಿ ನಡೆದ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ, ಕಿರುಕುಳವನ್ನು ಖಂಡಿಸಿ ಶಿರಸಿಯ ಜಾಗೃತ ಮಹಿಳಾ ವೇದಿಕೆ ಹಾಗೂ ವಿವಿಧ ಮಹಿಳಾ ಸಂಘಟನೆಗಳ ವತಿಯಿಂದ ನಗರದ ಸಹಾಯಕ ಆಯುಕ್ತರ ಕಛೇರಿಯೆದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಮೂಲಕ ಗೃಹ ಸಚಿವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ಶ್ರೀದೇವಿ ದೇಶಪಾಂಡೆ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ದಿನೇ ದಿನೇ ಹದಗೆಡುತ್ತಿರುವ ಪರಿಸ್ಥಿತಿ ಕಳವಳಕಾರಿಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕೇವಲ ನಿಘಂಟಿಗೆ ಮಾತ್ರ ಸೀಮಿತವಾದಂತಿದೆ. ದೌರ್ಜನ್ಯ, ಶೋಷಣೆಗಳು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದ್ದು, ಇಂತಹ ಘಟನೆಗಳು ತಾಲಿಬಾನ್ ಆಡಳಿತ ನೆನಪಿಸುವಂತಿದೆ ಎಂದರು.
ಉಷಾ ಹೆಗಡೆ ಮಾತನಾಡಿ, ಮಹಿಳಾ ಮುಖ್ಯಮಂತ್ರಿ ಇರುವ ರಾಜ್ಯದಲ್ಲೇ ಮಹಿಳೆಯರ ಮೇಲಿನ ದೌರ್ಜನ್ಯ ನಡೆದಿರುವುದು ಸಹಿಸಲಸಾಧ್ಯ. ಹೆಣ್ಣುಮಕ್ಕಳಿರುವ ಜಾಗ ಸ್ವರ್ಗದಂತೆ ಎಂಬ ಉಕ್ತಿಗೆ ವಿರುದ್ಧವಾದ ಸ್ಥಿತಿ ಪಶ್ಚಿಮ ಬಂಗಾಳದಲ್ಲಿದೆ. ದುರ್ಗೆಯನ್ನು ಶಕ್ತಿಯಾಗಿ ಪೂಜಿಸುವ ಸ್ಥಳದಲ್ಲಿ ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಹಾಡುಹಗಲೇ ರಸ್ತೆ ಮಧ್ಯದಲ್ಲಿ ದೌರ್ಜನ್ಯ ನಡೆಯುತ್ತಿರುವುದು ಖಂಡಿಸಲೇಬೇಕು. ಆದರೆ ಖಂಡಿಸುವ ಪ್ರವೃತ್ತಿ ಕಂಡುಬರುತ್ತಿಲ್ಲ. ಇಂತಹ ಘಟನೆಗಳಾದಾಗ ಮಹಿಳೆಯರೇ ಎಚ್ಚೆತ್ತುಕೊಳ್ಳಬೇಕಾಗಿದೆ. ಪಶ್ಚಿಮ ಬಂಗಾಳದಲ್ಲಷ್ಟೇ ಅಲ್ಲದೇ ದೇಶದ ಹಲವೆಡೆ ಮಹಿಳೆಯರ ಮೇಲಿನ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಅದನ್ನೆಲ್ಲಾ ಒಟ್ಟಾಗಿ ಖಂಡಿಸುವ ಕಾರ್ಯವಾಗಬೇಕಾಗಿದೆ ಎಂದರು.
ಈ ವೇಳೆ ನಂದಿನಿ ರಾಯಾಪುರ್, ಅಂಜನಾ ಭಟ್, ಹೇಮಾ ಹೆಗಡೆ, ಮಂಗಲಾ ಹಬ್ಬು, ಶಿಲ್ಪಾ ನಾಗರಕಟ್ಟೆ, ಪವಿತ್ರಾ ಹೊಸೂರ್, ಅನಿಲ್ ನಾಯಕ್, ಸತ್ಯನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು.