ಶಿರಸಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮವಾದ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ ಸೂಚನೆ ನೀಡಿದರು.
ಅವರು ಬುಧವಾರ ಶಿರಸಿ ತಾಲೂಕಿನ ವಾನಳ್ಳಿ, ಸಾಲ್ಕಣಿ, ಮೇಲಿನ ಓಣಿಕೆರಿ, ಹಾಗೂ ಹುಣಸೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಕ್ಕಳಿಗೆ ಶಾಲೆಯಲ್ಲಿ ನೀಡುವ ಆಹಾರದ ಗುಣಮಟ್ಟ, ಆಹಾರದ ಪ್ರಮಾಣ, ದಾಖಲೆಗಳ ನಿರ್ವಹಣೆ ಹಾಗೂ ಶಾಲಾ ಕೊಠಡಿ, ಗ್ರಂಥಾಲಯ ಇತರೆ ವಿಷಯಗಳ ಕುರಿತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಶಾಲೆಯಲ್ಲಿನ ಅಡುಗೆಕೋಣೆ ಸ್ವಚ್ಛವಾಗಿರಬೇಕು. ಅಲ್ಲದೇ ಮಕ್ಕಳಿಗೆ ನೀಡಲಾಗುವ ಪೌಷ್ಟಿಕ ಆಹಾರ ಸರಿಯಾಗಿ ವಿತರಣೆಯಾಗಬೇಕು, ಆಹಾರ ಶೇಖರಣಾ ಕೊಠಡಿಯು ಶುದ್ಧವಾಗಿದ್ದು, ಭದ್ರವಾಗಿರಬೇಕು. ಅವಧಿ ಮೀರಿದ, ಹಾಗೂ ಶುದ್ಧವಿಲ್ಲದ ಅಕ್ಕಿ, ಬೇಳೆಕಾಳುಗಳ ಬಳಕೆ ಮಾಡದಂತೆ ಸೂಚನೆ ನೀಡಿದರು. ಇದೇ ವೇಳೆ ಗ್ರಾಮ ಪಂಚಾಯತ್ ನಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ಪಡೆದು ನರೇಗಾದಡಿ ಮಾನವದಿನಗಳ ಸೃಜನೆ, ಕಾಮಗಾರಿಯಲ್ಲಿ ಪ್ರಗತಿ ಸಾಧನೆ, ಎಸ್ ಬಿಎಮ್, ವಸತಿ ಮನೆ ನಿರ್ಮಾಣ ಇತ್ಯಾದಿ ವಿಷಯಗಳ ಕುರಿತು ಪ್ರಗತಿ ಸಾಧಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿ ಬೆಂಚುಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಾಲಾ ಶಿಕ್ಷಕರು ಹಾಜರಿದ್ದರು.