ಜಿಟಿ ಜಿಟಿ ಮಳೆ, ಹಚ್ಚ ಹಸಿರಿನ ಕಾನನ, ಝುಳು ಝುಳು ಹರಿಯುವ ನದಿಗಳ ಝೇಂಕಾರ…. ಇವುಗಳನ್ನೆಲ್ಲ ನೆನಪಿಸಿಕೊಂಡರೆ ಸಾಕು ಮುಖದ ಮೇಲೆ ಒಂದು ಮಂದಹಾಸ ಮೂಡುವುದಂತೂ ಸಹಜ. ಅದರಲ್ಲೂ ಇಂತಹ ಪರಿಸರದಲ್ಲಿ ಜೀವನ ಸಾಗಿಸುತ್ತಿರುವ ನಾವು ಮಲೆನಾಡಿಗರು ನಿಜವಾಗಿಯೂ ಅದೃಷ್ಟವಂತರು. ಅದ್ಯಾವ ಜನ್ಮದ ಪುಣ್ಯಗಳ ಫಲವೋ ತಿಳಿಯದು ಈ ಜನ್ಮ ಈ ಪ್ರಕೃತಿಯ ಮಡಿಲಲ್ಲಿ ದೊರಕಿದೆ ಅಂದರೆ ಅತಿಶಯೋಕ್ತಿ ಆಗಲಾರದು.
ಆದರೆ, ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕಳೆದ ಬೇಸಿಗೆಯಲ್ಲಿನ ವಿಪರೀತ ತಾಪಮಾನವನ್ನು ಗಮನಿಸಿದರೆ, ಒಂದು ಸಮಾಜವಾಗಿ ನಾವೆಲ್ಲಿ ಎಡವಿದ್ದೇವೆ?? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದು ಉತ್ತಮ ಎಂದೆನಿಸುತ್ತದೆ.
ಇದೇ ಕಾರಣಕ್ಕಾಗಿ, ಸ್ವಯಂಪ್ರೇರಿತವಾಗಿ,ನಾವು ಹುಟ್ಟಿಬೆಳೆದ, ನಮ್ಮನ್ನು ಪೋಷಿಸಿ, ಸಲಹಿದ ಪರಿಸರಕ್ಕೆ ನಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು ಎಂದು ಜನ್ಮತಾಳಿದ ತಂಡ ‘ಹ(ಉ)ಸಿರು ತಂಡ.’
ಹೀಗೆ ಮುಸ್ಸಂಜೆವೇಳೆಯಲ್ಲಿ ಶಿರಸಿಯ ಗುರುವಳ್ಳಿ ಗ್ರಾಮದ ಮಂಡೇಮನೆಯಲ್ಲಿ ಊರ ಹುಡುಗರೆಲ್ಲ ಕುಳಿತು ಕಷ್ಟ ಸುಖ ಹಂಚಿಕೊಳ್ಳುತ್ತಿರುವಾಗ, ಪರಿಸರದ ಬಗ್ಗೆ ಮುತುವರ್ಜಿ ಹೊತ್ತುಕೊಂಡು, ಏನನ್ನಾದರೂ ಮಾಡಬೇಕೆಂದು ಹುಟ್ಟಿಕೊಂಡ ತಂಡವೊಂದು ತನ್ನ ಐದನೇ ವರ್ಷದ ವಾರ್ಷಿಕ ವನ ಮಹೋತ್ಸವವನ್ನು ಜು.6 ರಂದು ಯಶಸ್ವಿಯಾಗಿ ನೆರವೇರಿಸಿದೆ.
ಬಹುತೇಕ ಯುವ ಇಂಜಿನಿಯರ್ಗಳು, CA ಗಳು, ವಿದ್ಯಾರ್ಥಿಗಳು, ವೈದ್ಯರು, MNC ಗಳಲ್ಲಿ ವೃತ್ತಿನಿರತರಾಗಿರುವವರನ್ನು ಒಳಗೊಂಡ ಈ ತಂಡವು ಅನುಭವಿ ರೈತರ, ಸ್ಥಳೀಯರ, ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ತನ್ನದೇ ಆದ ನೆರವನ್ನು ನೀಡುತ್ತಿದೆ. ಈ ಕಾರ್ಯಕ್ರಮವು ಪಂಚವಾರ್ಷಿಕ ಯೋಜನೆಯಾಗಿ ಉಳಿಯದೆ, ಐದನೇ ವರ್ಷವೂ ಸಹ ಸತತವಾಗಿ ತನ್ನ ಕೆಲಸವನ್ನು ನಿಸ್ವಾರ್ಥವಾಗಿ ಸಂಪನ್ನ ಗೊಳಿಸಿದೆ ಎಂಬ ವಿಷಯವು ತಂಡದ ಸದಸ್ಯರ ಉತ್ಸಾಹದ ಚಿಲುಮೆಗೆ ಹಿಡಿದ ಕೈಗನ್ನಡಿ.
ಈ ಐದು ವರ್ಷಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ಮಾದರಿಯಾಗಿದೆ. ತಮ್ಮ ವೃತಿಜೀವನದಲ್ಲಿನ ಒತ್ತಡಗಳ ನಡುವೆಯೂ ಬಿಡುವು ಮಾಡಿಕೊಂಡು ಪ್ರಕೃತಿಗಾಗಿ, ಮುಂದಿನ ಪೀಳಿಗೆಗಾಗಿ ನಾವೇನಾದರೂ ಉಳಿತು ಮಾಡಬೇಕೆಂಬ ಸದಸ್ಯರ ಛಲವೇ ತಂಡದ ಮೂಲ ಇಂಧನವಾಗಿ ತಂಡವನ್ನು ಮುಂದೆ ಸಾಗಿಸುತ್ತಿದೆ.
ಈ ಸಮಯದಲ್ಲಿ ತಂಡವು ತಮಗೆ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕರಿಸಿದ, ಪ್ರೋತ್ಸಾಹಿಸಿದ, ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಲು ಇಚ್ಛಿಸುತ್ತದೆ. ಮುಂಬರುವ ದಿನಗಳಲ್ಲಿ ತಂಡದ ಸಾಮರ್ಥ್ಯವು ಹೆಮ್ಮರದಂತೆ ಬೆಳೆದು, ಇನ್ನೂ ಹಲವಾರು ತಂಡಗಳು ಮಳೆಗಾಲದಲ್ಲಿ ಅಣಬೆಗಳು ಹುಟ್ಟುವ ರೀತಿಯಲ್ಲಿ ಎಲ್ಲಾ ಕಡೆ ರೂಪುಗೊಂಡು, ಪರಿಸರದ ಬಗೆಗೆ ಕಾಳಜಿ ಹೆಚ್ಚಾಗಲಿ ಎಂಬುದಷ್ಟೇ ನಮ್ಮ ಆಶಯ.