ಸರ್ವಗಸ್ಸರ್ವವಿಧ್ಭಾನುಃ ವಿಶ್ವಕ್ಸೇನೋ ಜನಾರ್ದನಃ|
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿಃ”||
ಭಾವಾರ್ಥ:
ಸರ್ವಗನು ಎಂದರೆ ಎಲ್ಲೆಲ್ಲಿಯೂ ಹರಡಿರುವವನು. ಅವನು(ವಿಷ್ಣು) ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿರುತ್ತಾನೆ. ಎಲ್ಲವನ್ನು ಬಲ್ಲನು ಅಥವಾ ಪಡೆದಿರುತ್ತಾನೆ.ಆದ್ದರಿಂದ ‘ಸರ್ವವಿತ್’ ಎಲ್ಲವನ್ನು ತಿಳಿಯುವವನು. ಹಾಗೂ ಪ್ರಕಾಶಮಯ.ಆದ್ದರಿಂದ ‘ಸರ್ವವಿಧ್ಭಾನುಃ’ ನಮ್ಮ ಎಲ್ಲಾ ಜ್ಞಾನವು ಇಂದ್ರಿಯ, ಮನಸ್ದು,ಬುದ್ಧಿಗಳಲ್ಲಿ ಇರುತ್ತದೆ. ಇದನ್ನು ಪ್ರಕಾಶ ಪಡಿಸುವ ಪ್ರಜ್ಞಾ ಸ್ವರೂಪನಾದ ಪರಮಾತ್ಮನಿಗೆ ನಮ್ಮೆಲ್ಲರ ಜ್ಞಾನವೂ ಇದೆ.’ವಿಶ್ವಕ್ಸೇನಃ’ ಯಾಕೆಂದರೆ ಅವನು ಯುದ್ಧಕ್ಕೆ ಹೊರಟರೆ ದೈತ್ಯರ ಸೇನೆ ಸರ್ವ ದಿಕ್ಕುಗಳಿಗೆ ಪಲಾಯನ ಮಾಡುವುದು.ಜನಗಳನ್ನು ಅಂದರೆ ದುರ್ಜನರನ್ನು’ಆರ್ದಯತಿ’ ಕೊಲ್ಲುತ್ತಾನೆ ಅಥವಾ ನರಕಕ್ಕೆ ಕಳುಹಿಸುತ್ತಾನೆ. ಆದ್ದರಿಂದ ಜನಾರ್ದನನು. ಜನರಿಂದ ಐಹಿಕ ಅಭ್ಯುದಯ ಹಾಗೂ ಮುಕ್ತಿಗಾಗಿ ಬೇಡಲ್ಪಡುವನು. ವೇದರೂಪನಾಗಿರುವದರಿಂದ ವೇದವೆಂದು ಹೆಸರು. ನಾಲ್ಕು ವೇದಗಳ ಜ್ಞಾನಸ್ವರೂಪನು.ಎಲ್ಲಾ ವಿಜ್ಞಾನ, ವಾಣಿಜ್ಯ,ಕಲಾ ಶಾಸ್ತ್ರಗಳ ಜ್ಞಾನವೂ ಅವನೇ ಆಗಿದ್ದಾನೆ. ವೇದಾರ್ಥವನ್ನು ತಿಳಿದವನಾಗಿದ್ದರಿಂದ ‘ವೇದವಿತ್ತು’ ವ್ಯಂಗ ಎಂದರೆ ವಿಕಲತೆ. ಅವ್ಯಂಗಃ ಎಂದರೆ ವಿಕಲತೆ ಇಲ್ಲದವನು. ಅಂದರೆ ಜ್ಞಾನಾದಿಗಳಿಂದ ಪರಿಪರ್ಣವಾದವನು. ‘ಅವ್ಯಂಗಃ’ ಎಂದರೆ ಅವ್ಯಕ್ತತೆ ಎನ್ನುವ ಅರ್ಥವೂ ಇದೆ.ಅಂದರೆ ರೂಪ ಸಹಿತವಾಗಿ ಇವನನ್ನು ಕಾಣಲಾಗುವದಿಲ್ಲ. ‘ವೇದಾಂಗಃ’ ಎಂದರೆ ವೇದಗಳನ್ನೇ ಅವಯವಗಳಾಗಿ ಇರುವವನು. ವೇದಗಳನ್ನು ವಿಚಾರ ಮಾಡುತ್ತನಾದ್ದರಿಂದ ಈತನು ‘ವೇದವಿತ್’ ಎನಿಸುತ್ತಾನೆ. ಎಲ್ಲವನ್ನೂ ನೋಡುವವವನು. ನಮ್ಮೆಲ್ಲರ ಇಂದ್ರಿಯ,ಮನಸ್ಸು ಬುದ್ಧಿಗಳ ಮೂಲಕ ನೋಡುತ್ತಿರುವವನು ಅವನೇ ಆಗಿದ್ದಾನೆ.ಆದರೆ ಅವನು ಮಾತ್ರ ಎಂದಿಗೂ ದೃಶ್ಯ ವಸ್ತುವಾಗಿ ಕಂಡುಬರುವದಿಲ್ಲ.ಆದ್ದರಿಂದ ‘ಕವಿಃ’ ಎಂದು ಬಣ್ಣಿಸಲಾಗಿದೆ.
ಈ ಮೇಲಿನ ಶ್ಲೋಕದ ವೈಶಿಷ್ಟ್ಯ :-ಮಕ್ಕಳಿಗೆ (ಗಂಡಾಗಲಿ ಅಥವಾ ಹೆಣ್ಣಾಗಲಿ)ಒಳ್ಳೆಯ ಬುದ್ಧಿ, ಗುರುಹಿರಿಯರಲ್ಲಿ, ತಂದೆ ತಾಯಿಗಳಲ್ಲಿ ಗೌರವ, ವಿದ್ಯೆಯಲ್ಲಿ ಆಸಕ್ತಿ ಓದು ತಲೆಗೆ ಹತ್ತಬೇಕಾದರೆ, ಓದಿದ್ದು ನೆನಪಿನಲ್ಲಿ ಉಳಿಯಬೇಕಾದರೆ,ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿ ಬುದ್ಧಿವಂತ ವಿದ್ಯಾರ್ಥಿಯಾಗಿ ಯಶಸ್ವಿ ವಿದ್ಯಾರ್ಥಿಎಂಬ ಹೆಸರು ಗಳಿಸಬೇಕಾದರೆ ಈ ಮೇಲಿನ ಸ್ತೋತ್ರ ಹೇಳಿಕೊಳ್ಳಬೇಕು. ಮಕ್ಕಳು ತುಂಬಾ ಚಿಕ್ಕವರಾದರೆ ಮಕ್ಕಳ ಪರವಾಗಿ ಪಾಲಕರೂ ಹೇಳಿಕೊಳ್ಳಬಹುದು.(ಇದು ರೋಹಿಣಿ ನಕ್ಷತ್ರದ 2ನೇ ಪಾದದವರು ನಿತ್ಯವೂ 11 ಬಾರಿ ಹೇಳಿಕೊಳ್ಳುವ ವಿಷ್ಣು ಸಹಸ್ರನಾಮದ 14 ನೇ ಶ್ಲೋಕವೂ ಹೌದು).
(ಸಂಗ್ರಹ:-ಡಾ. ಚಂದ್ರಶೇಖರ.ಎಲ್.ಭಟ್. ಬಳ್ಳಾರಿ)