ಮುಖ್ಯಾಧಿಕಾರಿ ಪ್ರವೀಣಕುಮಾರ, ಪ.ಪಂ. ಸದಸ್ಯ ವಿಜಯ್ ಕಾಮತ್ ಬಲೆಗೆ | ಉಪ್ಪು ತಿಂದವರು ನೀರು ಕುಡಿಯಲೇ ಬೇಕೆಂದ ಜನ
ಹೊನ್ನಾವರ: ಪಟ್ಟಣ ಪಂಚಾಯತ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಇ-ಸ್ವತ್ತು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ.ಪಂ ಮುಖ್ಯಾಧಿಕಾರಿ ಹಾಗೂ ಪ.ಪಂ ಚುನಾಯಿತ ಸದಸ್ಯ ಇಬ್ಬರನ್ನು ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿಯಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ಕಾನೂನು ಕ್ರಮ ಕೈಗೊಂಡ ಘಟನೆ ಬುಧವಾರ 11.30 ಕ್ಕೆ ಪ.ಪಂ ಕಾರ್ಯಾಲಯದಲ್ಲಿ ಕಛೇರಿ ಅವಧಿಯಲ್ಲಿಯೇ ನಡೆದಿದೆ. ಬಂಧಿತ ವ್ಯಕ್ತಿಗಳು ಪ.ಪಂ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರವೀಣ್ ಕುಮಾರ ನಾಯಕ ಹಾಗೂ ಪ.ಪಂ ಸದಸ್ಯ ವಿಜಯ ವೇಂಕಟೇಶ ಕಾಮತ್ ಆಗಿದ್ದಾರೆ.
ಲೋಕಾಯುಕ್ತ ದಾಳಿಯ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ಪತ್ರಕರ್ತರೊಂದಿಗೆ ಮಾತನಾಡಿ ಸ್ಥಳೀಯ ಚಂದ್ರಹಾಸ ಬಾಂದೇಕರ ಎನ್ನುವವರಿಗೆ ಸೇರಿದ ಆಸ್ತಿಯನ್ನು ಇ-ಸ್ವತ್ತು ಮಾಡಿಸಲು ಪ.ಪಂ ಮುಖ್ಯಾಧಿಕಾರಿ ರೂ. 2,50,000/- ಬೇಡಿಕೆ ಇಟ್ಟಿದ್ದರು. ಮಧ್ಯವರ್ತಿಯಾಗಿ ಪ.ಪಂ ಸದಸ್ಯರೊಬ್ಬರು ಕಾರ್ಯ ನಿರ್ವಹಿಸಿದ್ದರು. ಪ.ಪಂ ಮುಖ್ಯಾಧಿಕಾರಿ ಬೇಡಿಕೆಯಂತೆ 2,50,000/- ಗಳಲ್ಲಿ ಮುಂಗಡವಾಗಿ 60,000/- ಗಳನ್ನು ಚಂದ್ರಹಾಸ ಮಧ್ಯವರ್ತಿ ಪ.ಪಂ ಸದಸ್ಯನ ಮೂಲಕ ಹಸ್ತಾಂತರ ಮಾಡುತ್ತಿದ್ದರು. ಈ ಸಮಯದಲ್ಲಿ ದಾಳಿ ನಡೆಸಿ ಹಣದ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದೇವೆ. ಈ ಕುರಿತು ಮಂಗಳವಾರವೇ ದೂರು ಸ್ವೀಕರಿಸಲಾಗಿತ್ತು. ಆರೋಪಿಗಳನ್ನು ಕೆಲವೇ ಹೊತ್ತಿನಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರದಲ್ಲಿ ಹಾಜರು ಪಡಿಸಲಿದ್ದೇವೆ ಎಂದರು.
ದಾಳಿಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ, ಪ್ರಸಾದ, ಸಿದ್ದರಾಜು, ಹೆಡ್ ಕಾನ್‌ಸ್ಟೇಬಲ್‌ಗಳಾದ ನಾರಾಯಣ ನಾಯ್ಕ, ಶ್ರೀ ಕೃಷ್ಣ, ಪ್ರದೀಪ್, ರಫಿಕ್ ಹಾಗೂ ಪೋಲಿಸರಾದ ಶಿವಕುಮಾರ, ಗಜೇಂದ್ರ, ಆನಂದ, ವಿದ್ಯಾಜ್ಯೋತಿ, ಸಂಜೀವ, ಮೆಹಬೂಬ್, ಸತೀಶ್, ಮಹೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.
ಭ್ರಷ್ಟಾಚಾರ ನಡೆದಲ್ಲಿ ದೂರು ನೀಡಲು ಹೆದರಬಾರದು :
ಹೊನ್ನಾವರ ಪ.ಪಂ ಮುಖ್ಯಾಧಿಕಾರಿಯ ವಿರುದ್ಧ ಹಲವು ದೂರುಗಳು ಬರುತ್ತಿದ್ದವು ಆದರೆ ಖಚಿತ ದಾಖಲೆಗಳು ಇರಲಿಲ್ಲ. ಆದರೆ ಚಂದ್ರಹಾಸ ಬಾಂದೆಕರ ಪ್ರಕರಣದಲ್ಲಿ ದಾಖಲೆಗಳು ಸಹ ಇದ್ದವು. ನಾಗರಿಕರು ಭ್ರಷ್ಟಾಚಾರ ನಡೆದಲ್ಲಿ ದೂರು ನೀಡಲು ಹೆದರಬಾರದು. ದೂರು ಸತ್ಯವಾಗಿದ್ದರೆ ಕಾನೂನು ಕ್ರಮ ಜರುಗಿಸಿ ದೂರುದಾರರ ಕೆಲಸವನ್ನು ಪೂರ್ಣಮಾಡಿ ಕೊಡಲಾಗುತ್ತದೆ. ಸುಳ್ಳು ಮತ್ತು ದ್ವೇಷದ ದೂರನ್ನು ನೀಡಿದರೆ ದೂರುದಾರನ ವಿರುದ್ಧವೇ ಕಾನೂನು ಕ್ರಮ ಜರುಗಿಸುತ್ತೇವೆ. ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ದಾಖಲಾದ ಬಹುತೇಕ ಪ್ರಕರಣಗಳು ಸರಿಯಾದ ಸಾಕ್ಷಿ ಮತ್ತು ದಾಖಲೆಗಳಿದ್ದರಿಂದ ಆರೋಪಿಗಳನ್ನು ನ್ಯಾಯಾಲಯವು ಶಿಕ್ಷೆಗೊಳಪಡಿಸಿದೆ. ಭ್ರಷ್ಟಾಚಾರ ನಡೆದಲ್ಲಿ ನಾಗರಿಕರು ಹೆದರದೇ ಮಾಹಿತಿಯನ್ನು ಲೋಕಾಯುಕ್ತಕ್ಕೆ ನೀಡಿ. ಅವಶ್ಯವಿದ್ದರೆ ತಮ್ಮನ್ನು ಮೋ.ನಂ. 9364062527 ಮೂಲಕ ಸಂರ್ಪಕಿಸಿ ಎಂದರು.
ಸಾರ್ವಜನಿಕರ ಮುತ್ತಿಗೆ :
ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಹಲವು ದೂರುಗಳ ಸಹಿತವಾಗಿ ಕಛೇರಿಗೆ ಮುತ್ತಿಗೆ ಹಾಕಿದರು. ಅವುಗಳಲ್ಲಿ ಇಸ್ವತ್ತು ಹಗರಣಗಳು, ಜನನ ಮರಣ ನೋಂದಣಿ ಪ್ರಕರಣಗಳು, ಕಟ್ಟಡ ಅನುಮತಿ ಪ್ರಕರಣಗಳು, ವಾಯುವಿಹಾರ ದೋಣಿಗಳಿಗೆ ಅನುಮತಿ ನೀಡಿದ ಪ್ರಕರಣಗಳು, ಮರಳು ದೋಣಿಗಳಿಗೆ ಮರಳು ದಾಸ್ತಾನು ಮಾಡಲು ಅನುಮತಿ ನೀಡುವ ಪ್ರಕರಣಗಳು, ಹೀಗೆ ತರಹೇವಾರಿಗಳಿದ್ದು ಲೋಕಾಯುಕ್ತರ ಬಳಿ ತಮಗಾದ ಅನ್ಯಾಯದ ಕುರಿತು ಮಾಹಿತಿ ನೀಡುತ್ತಿದ್ದರು. ದಾಖಲೆ ಮತ್ತು ದೂರಿನೊಂದಿಗೆ ಸಂಪರ್ಕಿಸಲು ಅಧಿಕಾರಿಗಳು ಸೂಚನೆ ನೀಡಿದರು.
ಪ. ಪಂ. ಸದಸ್ಯರು ಇವರ ಬೆಂಬಲಕ್ಕೆ ನಿಂತರೆ ?
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರವೀಣಕುಮಾರ್ ವಿರುದ್ಧ ಆರೋಪ ಈ ಹಿಂದಿನಿಂದಲು ಇತ್ತು. ಆದರೆ ಇಂತ ಭ್ರಷ್ಟ ಅಧಿಕಾರಿಯನ್ನು ಪ.ಪಂ.ದಲ್ಲಿ ಅವಕಾಶ ಮಾಡಿಕೊಟ್ಟಿದ್ದು ಯಾಕೆ..? ಪ.ಪಂ. ಸದಸ್ಯರು ಇವರನ್ನು ವರ್ಗಾವಣೆ ಮಾಡುವ ಪ್ರಯತ್ನ ಯಾಕೆ ಮಾಡಿಲ್ಲ..? ಈ ಹಿಂದೆ ಬಿಜೆಪಿ ಆಡಳಿತ ಇತ್ತು. ಪ.ಪಂ. ಕೂಡ ಅವರದ್ದೇ ಹಿಡಿತದಲ್ಲಿತ್ತು ಹಾಗಿದ್ದರು ಕೂಡ ಇವರೇ ಮುಂದುವರಿದಿದ್ದು ಹೇಗೆ ಅನ್ನುವ ಪ್ರಶ್ನೆ ಹುಟ್ಟು ಹಾಕಿದೆ. ಇದೀಗ ಕಾಂಗ್ರೇಸ್ ಆಡಳಿತ ಈಗಲೂ ಬದಲಾವಣೆ ಪ್ರಯತ್ನ ಯಾಕೆ ಮಾಡಿಲ್ಲ..? ಕೆಲವು ಪ್ರಭಾವಿ ಪ.ಪಂ. ಸದಸ್ಯರು ಪ್ರವೀಣಕುಮಾರ್ ಬೆಂಬಲಕ್ಕೆ ನಿಂತಿದ್ದರೆ ಹೇಗೆ ನೂರೆಂಟು ಪ್ರಶ್ನೆ ಮೂಡುತ್ತಿದೆ. ಪ.ಪಂ. ಸದಸ್ಯ ವಿಜಯ್ ಕಾಮತ್ ಕೂಡ ಇದರಲ್ಲಿ ಇರುವುದರಿಂದ ಈ ಬೆಳವಣಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಕಾಮತ್, ಶಾಸಕ ದಿನಕರ ಶೆಟ್ಟರ ಆಪ್ತರು ಕೂಡ ಹೌದು, ಹೀಗಿರುವಾಗ ಭ್ರಷ್ಟ ಅಧಿಕಾರಿ ಇಲ್ಲಿ ನೆಲೆ ಊರಲು ಕೆಲವರ ಬೆಂಬಲ ಇತ್ತೆ ಎನ್ನುವ ಸುದ್ದಿ ಚರ್ಚೆಗೆ ಕಾರಣವಾಗಿದೆ.
ಪ್ರವೀಣ್‌ಕುಮಾರ್ ವಿರುದ್ಧ ಆರೋಪದ ಸುರಿಮಳೆ: ಕಳೆದ ಮೂರು ವರ್ಷಗಳಿಂದ ಪ.ಪಂ. ಮುಖ್ಯಕಾರ್ಯನಿರ್ವಾಹಕರಾಗಿದ್ದ ಪ್ರವೀಣಕುಮಾರ ಪ.ಪಂ. ವ್ಯಾಪ್ತಿಯಲ್ಲಿ ಹೊಸ ನಿಯಮಗಳನ್ನೇ ಹುಟ್ಟು ಹಾಕಿದ್ದಾರೆ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇತ್ತು. ಪ.ಪಂ. ದಲ್ಲಿ ಕೆಲಸ ಆಗಬೇಕು ಅಂದರೆ ಲಂಚ ನೀಡಲೇಬೇಕಾದ ಅನಧಿಕೃತ ನಿಯಮ ಜಾರಿಯಾಗಿ ಬಿಟ್ಟಿತ್ತು.
ಸಾರ್ವಜನಿಕರಿಂದ ಹಿಡಿ ಶಾಪ :
ಪ.ಪಂ. ಅಂಗಳದಲ್ಲಿ ಸೇರಿದ ಸಾರ್ವಜನಿಕರು ಪ.ಪಂ. ಕಾರ್ಯನಿರ್ವಾಹಕ ಪ್ರವೀಣಕುಮಾರ್ ವಿರುದ್ದ ಶಾಪ ಹಾಕುತ್ತಿರುವುದು ಕಂಡು ಬಂತು. ಯಾವ ಕೆಲಸಕ್ಕೆ ಹೋದರು ಹಣ ಕೇಳುತ್ತಿದ್ದರು. ಗೌರವ ಕೊಡುತ್ತಿರಲಿಲ್ಲ. ಏನ್ ಬೇಕಾದ್ರು ಮಾಡಿ, ಹಾಗೆ ಹೀಗೆ ಹೇಳುತ್ತಿದ್ದರು, ಲೋಕಾಯುಕ್ತ ದಾಳಿ ಆಗಿದ್ದು ಸೂಕ್ತವಿದೆ. ಯಾವತ್ತೇ ಆಗಬೇಕಿತ್ತು, ಇನ್ನಾದರೂ ಪ.ಪಂ. ಸುಧಾರಿಸಲಿ ಎನ್ನುವ ಮಾತು ಕೇಳಿ ಬಂತು.
ವೇಷ ಮರೆಸಿ ಬಂದ ಅಧಿಕಾರಿ:
ಲೋಕಾಯುಕ್ತಕ್ಕೆ ದೂರು ನೀಡಿದ ವ್ಯಕ್ತಿ ಪ.ಪಂ. ಮುಖ್ಯಾಧಿಕಾರಿಗೆ ಹಣ ನೀಡುವ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿ ಒಬ್ಬರು ಜನ ಸಾಮಾನ್ಯರಂತೆ ಲುಂಗಿ ಉಟ್ಟು ಅವರ ಜೊತೆ ಬಂದವರಂತೆ ಹೋಗಿದ್ದು, ಅಧಿಕಾರಿಗಳ ಪಕ್ಕಾ ಪೂರ್ವ ಸಿದ್ಧತೆ ಬಗ್ಗೆ ತಿಳಿದು ಬರುತ್ತದೆ. ಮಾಹಿತಿ ಪ್ರಕಾರ ಮಂಗಳವಾರವೇ ದಾಳಿ ನಡೆಯುವುದಿತ್ತು. ಪ.ಪಂ. ಅಧಿಕಾರಿ ಕಚೇರಿಯಲ್ಲಿ ಇಲ್ಲದೆ ಇರುವುದರಿಂದ ಬುಧವಾರ ದಾಳಿ ನಡೆದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಹಳ ದಿನಗಳಿಂದ ಈ ಅಧಿಕಾರಿ ವಿರುದ್ದ ಕ್ರಮಕ್ಕೆ ಕಾಯುತ್ತಲೇ ಇರುವ ಸಾರ್ವಜನಿಕರಿಗೆ ಸಂತಸ ಉಂಟುಮಾಡಿದೆ. ಹಣದ ಹಿಂದೆ ಬಿದ್ದು ಲಂಚದ ಆಸೆಗೆ ಅಧಿಕಾರಿ ಕೆಡ್ಡಕ್ಕೆ ಬಿದ್ದಂತೆ ಆಗಿದ್ದು, ಉಪ್ಪು ತಿಂದವ ನೀರು ಕುಡಿಯಲೇ ಬೇಕು ಎನ್ನುವ ಗಾದೆ ಮಾತಿನಂತಾಗಿದೆ.
ಲೋಕಾಯುಕ್ತ ದಾಳಿ ಸಮಯದಲ್ಲಿ ಕೇಳಿ ಬಂದ ಪ್ರಮುಖ ಆರೋಪಗಳು
- ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ, ಲಂಚದ ಕೆಲಸಕ್ಕೆ ಮಾತ್ರ ಆದ್ಯತೆ
- ವಾಣಿಜ್ಯ ಮಳಿಗೆ ಮತ್ತು ವಸಾಹತು ಇತರೆ ಕಟ್ಟಡ ಕಟ್ಟಲು ಅನುಮತಿಗೆ ದುಬಾರಿ ಹಣ ಬೇಡಿಕೆ
- ಜನ್ಮದಾಖಲೆ, ವಿದ್ಯಾರ್ಥಿಗಳ ಸಣ್ಣ ಕೆಲಸಕ್ಕೂ ಹಣ ಬೇಡಿಕೆ
- ಮಾಹಿತಿ ಹಕ್ಕಿಗೂ ಕೊಡದ ಕಿಮ್ಮತ್ತು
- ಬೆದರಿಕೆ, ಪೊಲೀಸ್ ದೂರಿನ ಅವಾಜ್
- ಇವನು ಪಡೆಯುವ ಹಣ ಸಿಬ್ಬಂದಿ ಒಬ್ಬರ ಖಾತೆಗೆ ಜಮಾ
- ಸ್ವಚ್ಛತಾ ಕೆಲಸದ ಪೌರ ಕಾರ್ಮಿಕರ ನೇಮಕಾತಿ ಆದವರಿಂದಲೂ ಲಂಚದ ಬೇಡಿಕೆ