ಕುಮಟಾ: ಧಾರೇಶ್ವರ ಗೋರೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದರೋಡೆ ಮಾಡಿದ ಇಬ್ಬರನ್ನು ಸಿಪಿಐ ತಿಮ್ಮಪ್ಪ ನಾಯ್ಕ ಬಂಧಿಸಿದ್ದಾರೆ.
ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ವಾಸವಾಗಿದ್ದ ವಿವೇಕಾನಂದ ಖಾರ್ವಿ ತನ್ನ ಸ್ನೇಹಿತನಾದ ಹೊನ್ನಾವರ ಹಳದಿಪುರದ ಈಶ್ವರ ಅಮವಾಸ್ಯೆ ಮುಕ್ರಿ ಜೊತೆ ಸೇರಿ ದರೋಡೆ ಮಾಡಿದ್ದ. 1.27 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದ. ಜು.1ರಂದು ದೇವಸ್ಥಾನದಲ್ಲಿ ಕಳ್ಳತನ ನಡೆದ ಬಗ್ಗೆ ಅರ್ಚಕ ಶ್ರೀಧರ ಭಟ್ಟ ದೂರು ನೀಡಿದ್ದರು. ಅಲ್ಲಿನ ಸಿಸಿ ಕ್ಯಾಮರಾ ಸಹ ಕಳ್ಳ ದೋಚಿದ್ದು, ಪಿಎಸೈ ಸುನೀಲ ಬಂಡಿವಡ್ಡರ್ ಸುತ್ತಲಿನ ಪ್ರದೇಶದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ವಿವೇಕಾನಂದ ದುರ್ಗಯ್ಯ ಖಾರ್ವಿ ಎಂಬಾತ ಅನುಮಾನಾಸ್ಪದವಾಗಿ ಕಾಣಿಸಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಇಬ್ಬರು ಸೇರಿ ದರೋಡೆ ಮಾಡಿರುವುದು ಗೊತ್ತಾಗಿದೆ.
ವಿವೇಕಾನಂದ ಖಾರ್ವಿ ವಿರುದ್ಧ ಅಂಕೋಲಾದಲ್ಲಿ ಕೊಲೆ ಹಾಗೂ ಇನ್ನೆರಡು ಕಡೆ ದೇವಾಲಯ ದರೋಡೆ ಪ್ರಕರಣ ವಿಚಾರಣೆ ನಡೆಯುತ್ತಿದೆ. ಕುಮಟಾ ಹಾಗೂ ಅಂಕೋಲಾ ನ್ಯಾಯಾಲಯಕ್ಕೆ ಸಹ ಈತ ಬೇಕಾಗಿದ್ದು, ಪೊಲೀಸರು ಹುಡುಕಾಟದಲ್ಲಿದ್ದರು. ಪ್ರಸ್ತುತ ಈ ಆರೋಪಿಗಳಿಂದ 86 ಸಾವಿರ ರೂ ಮೌಲ್ಯದ ಚಿನ್ನ ಹಾಗೂ 3500ರೂ ಹಣ ದೊರೆತಿದೆ. ನ್ಯಾಯಾಲಯ 15 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.